ಉಡುಪಿ: ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕ ದೂರುದಾರನನ್ನು ಬಂಧಿಸಲಾಗಿದೆ. ಮುಂದಿನ ಕ್ರಮ ಎಸ್‌ಐಟಿ ನಿರ್ಧರಿಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸೆಕ್ಷನ್ ನಲ್ಲಿ ಬಂಧಿಸಲಾಗಿದೆ ಅನ್ನುವುದು ಎಸ್ಐಟಿಯವರಿಗೆ ಗೊತ್ತು. ಸದ್ಯ ಆತ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ. ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಇದರ ಹಿಂದೆ ಯಾವ ಜಾಲ ಇದೆ ಅನ್ನುವುದನ್ನು ಪತ್ತೆ ಮಾಡಲಾಗುವುದು ಎಂದರು.
ಸುಜಾತ ಭಟ್ ವಿಚಾರ ಕೂಡ ತನಿಖೆಯಲ್ಲಿದೆ. ತನಿಖೆಯ ವರದಿಗಳು ಬರುವವರೆಗೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಯಾವುದೇ ವಿಚಾರ ಬಹಿರಂಗಗೊಂಡರೆ ಎಸ್ಐಟಿ ತನಿಖೆಗೆ ಅಡ್ಡಿಯಾಗುತ್ತದೆ. ಯಾವುದನ್ನು ಕೂಡ ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿಜೆಪಿಯವರು ಅನೇಕ ಆರೋಪಗಳನ್ನು ಮಾಡಬಹುದು. ಬೇರೆ ಬೇರೆ ರೀತಿಯ ಹೇಳಿಕೆಗಳು ಬರಬಹುದು. ಹೇಳಿಕೆಗಳ ಆಧಾರದಲ್ಲಿ ತನಿಖೆ ಮಾಡಲು ಆಗಲ್ಲ. ಎಸ್ಐಟಿ ತನ್ನ ಅಂತಿಮ ವರದಿ ಸಲ್ಲಿಸುವವರೆಗೆ ಏನು ಹೇಳಲು ಆಗಲ್ಲ ಎಂದರು.
2023ರಲ್ಲಿ ಹರೀಶ್ ಪೂಂಜ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಪೂಂಜ ಅವರು ಈಗಾಗಲೇ ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ತಡೆಯಾಜ್ಞೆ ತೆರವಾದರೆ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಿದರು.

