ಚಾರ್ಮಾಡಿ ಘಾಟ್​ ನಲ್ಲಿ ರಾತ್ರಿ ಸಂಚಾರದಲ್ಲಿ ಹೊಸ ನಿಯಮ, ಏನದು?

0
78

ಚಿಕ್ಕಮಗಳೂರು: ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರಿನ ಕೊಟ್ಟಿಗೆಹಾರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟ್​ ಪ್ರಕೃತಿ ಸೌಂದರ್ಯದ ಗಣಿಯಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಚಾರ್ಮಾಡಿ ಘಾಟ್​ನಲ್ಲಿ 24 ಗಂಟೆಯೂ ವಾಹನಗಳು ಸಂಚರಿಸುತ್ತವೆ. ಚಾರ್ಮಾಡಿ ಘಾಟ್​ನ ಕೊಟ್ಟಿಗೆಹಾರ ಬಳಿ ಇರುವ ಪೊಲೀಸ್ ಚೆಕ್​ ಪೋಸ್ಟ್​ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರೂ ಅಕ್ರಮವಾಗಿ ಮರಳು ಸಾಗಾಟ, ಗೋ ಸಾಗಾಟ ಮತ್ತು ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವುದು ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ.

ಈ ಅಪರಾಧ ಚಟುವಟಿಕೆಗಳನ್ನು ತಡೆಯಲು ಚಿಕ್ಕಮಗಳೂರು ಪೊಲೀಸ್ ಇಲಾಖೆ ಹೊಸ ಪ್ಲಾನ್ ರೂಪಿಸಿದೆ. ಕೊಟ್ಟಿಗೆಹಾರ ಚೆಕ್ ​​ಪೋಸ್ಟ್​ನಲ್ಲಿ ಪ್ರತಿ ವಾಹನಗಳ ತಪಾಸಣೆ ಮಾಡುವುದರ ಜೊತೆಗೆ ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ವೇಳೆ ಐದು ವಾಹನಗಳನ್ನು ಒಟ್ಟಿಗೆ ಕಳುಹಿಸಲಾಗುತ್ತಿದೆ. ಈ ಹೊಸ ನಿಯಮ ಚಾರ್ಮಾಡಿ ಘಾಟ್​ನಲ್ಲಿ ರಾತ್ರಿ ಸಂಚಾರ ಮಾಡುವ ವಾಹನಗಳಿಗೆ ಅನ್ವಯವಾಗಲಿದೆ.

ಚಾರ್ಮಾಡಿ ಫಾಟ್​ಗೆ ತೆರಳಲು ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗು ಬರುವ ವಾಹನಗಳನ್ನು ಕೊಟ್ಟಿಗೆಹಾರ ಚೆಕ್​​ಪೋಸ್ಟ್​ ಬಳಿ ನಿಲ್ಲಿಸಿ 5 ವಾಹನ ಜೊತೆ ಮಾಡಿ ಬಿಡಲಾಗುತ್ತಿದೆ. ಚಾರ್ಮಡಿ ಘಾಟ್​ನಲ್ಲಿ ರಾತ್ರಿ ವೇಳೆ ಒಂದೊಂದೇ ವಾಹನ ಸಂಚಾರವನ್ನು ಚಿಕ್ಕಮಗಳೂರು ಪೊಲೀಸ್ ಇಲಾಖೆ ನಿಷೇಧಿಸಿದೆ. ಈ ನಿಯಮ ಅಪರಾಧ ತಡೆಯುವ ನಿಟ್ಟಿನಲ್ಲಿ ಜಾರಿ ಮಾಡಲಾಗಿದೆ. 24 ಗಂಟೆಯೂ ಕೊಟ್ಟಿಗೆಹಾರ ಚೆಕ್​​​ಪೋಸ್ಟ್​ನಲ್ಲಿ ಓರ್ವ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 24 ಗಂಟೆಯೂ ಚಾರ್ಮಾಡಿ ಘಾಟ್​​ನಲ್ಲಿ ಪೊಲೀಸ್ ವಾಹನ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ, ಅಪರಾಧ ಕೃತ್ಯ ಎಸಗಿ ಪರಾರಿಯಾಗುತ್ತಿದ್ದವರ ಬಂಧನಕ್ಕೆ ಚಿಕ್ಕಮಗಳೂರು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here