ಯಕ್ಷಧ್ರುವ ಪಟ್ಲ ಫೌಂಡೇಶನ್; ಬಹರೈನ್–ಸೌದಿ ಘಟಕ; ಪಂಚಮ ವಾರ್ಷಿಕೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

0
116

ಬಹರೈನ್: ಆಶಕ್ತ ಕಲಾವಿದರ ಕ್ಷೇಮಾಭ್ಯುದಯದ ಸಂಕಲ್ಪದೊಂದಿಗೆ ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ದೂರದರ್ಶಿತ್ವದಲ್ಲಿ ಸ್ಥಾಪಿತವಾದ ಯಕ್ಷಧ್ರುವ ಪಟ್ಲ ಫೌಂಡೇಶನ್, ಕಳೆದ ಹತ್ತು ವರ್ಷಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ದಾನಿಗಳಿಂದ ಸ್ವೀಕರಿಸಿ ಆರ್ಥಿಕ ಸಂಕಷ್ಟದಲ್ಲಿರುವ ಅನೇಕ ಕಲಾವಿದರಿಗೆ ಸಹಾಯ ಹಸ್ತ ಚಾಚುತ್ತಿದೆ. ದೇಶ–ವಿದೇಶಗಳಲ್ಲಿ ಸುಮಾರು 43 ಘಟಕಗಳನ್ನು ಹೊಂದಿರುವ ಈ ಸಂಸ್ಥೆಯ ಬಹರೈನ್–ಸೌದಿ ಘಟಕಕ್ಕೆ ಈ ಬಾರಿ ಪಂಚಮ ಪಟ್ಲ ಸಂಭ್ರಮ.

ಇದೇ ಪ್ರಯುಕ್ತ ಕಳೆದ ಆಗಸ್ಟ್ 22ರಂದು ಕನ್ನಡಭವನದಲ್ಲಿ ವಾರ್ಷಿಕೋತ್ಸವದ ಭಿತ್ತಿ ಪತ್ರ ಹಾಗೂ ಆಮಂತ್ರಣ ಬಿಡುಗಡೆ ಜೊತೆಗೆ ಪ್ರಸಂಗದ ಮುಹೂರ್ತ ಪೂಜೆ ಅದ್ದೂರಿಯಾಗಿ ನೆರವೇರಿತು.

ಗೌರವಾಧ್ಯಕ್ಷ ಸುಭಾಶ್ಚಂದ್ರ, ಘಟಕದ ಅಧ್ಯಕ್ಷ ದೀಪಕ್ ರಾವ್ ಪೇಜಾವರ ಹಾಗೂ ಸಮಿತಿಯ ಸದಸ್ಯರು ಐದನೇ ವರ್ಷದ ಸಂಭ್ರಮವನ್ನು ತಾಯ್ನಾಡ ಖ್ಯಾತ ಕಲಾವಿದರು ಹಾಗೂ ಬಹರೈನ್–ಸೌದಿ ಕಲಾವಿದರ ಸಮಾಗಮದಲ್ಲಿ “ಶ್ರೀದೇವಿಮಹಾತ್ಮೆ” ಯಕ್ಷಗಾನ ಪ್ರಸಂಗದ ಮೂಲಕ ಆಚರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮ ಅಕ್ಟೋಬರ್ 31, 2025, ಶುಕ್ರವಾರ ಮಧ್ಯಾಹ್ನ 2ರಿಂದ ಸಂಜೆ 7ರವರೆಗೆ ಮನಾಮದಲ್ಲಿರುವ ಕನ್ನಡಭವನ ಸಭಾಂಗಣದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬಂಟ್ಸ್ ಬಹರೈನ್ ಅಧ್ಯಕ್ಷ ಡಾ. ಮಿಥುನ್ ಭಂಡಾರಿ, ಬಹರೈನ್ ಬಿಲ್ಲವಾಸ್ ಅಧ್ಯಕ್ಷ ಪ್ರಕಾಶ್ ಅಂಚನ್, ಮೊಗವೀರ್ಸ್ ಬಹರೈನ್ ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್, ವಿಶ್ವಕರ್ಮ ಸೇವಾ ಬಳಗದ ಅಧ್ಯಕ್ಷ ಸತೀಶ್ ಉಳ್ಳಾಲ್ , ಕುಲಾಲ್ಸ್ ಬಹರೈನ್ ಅಧ್ಯಕ್ಷ ಗಣೇಶ್ ಮಾಣಿಲ, ಅಮ್ಮ ಕಲಾವಿದರು ಅಧ್ಯಕ್ಷ ಪ್ರಸಾದ್ ಶೆಟ್ಟಿ ಮಜ್ಜಾರ್, ಪಟ್ಲ ಫೌಂಡೇಶನ್ ಮಾಜಿ ಅಧ್ಯಕ್ಷರು ರಾಜೇಶ್ ಶೆಟ್ಟಿ, ನರೇಂದ್ರ ಶೆಟ್ಟಿ, ಉಪಾಧ್ಯಕ್ಷ ಗೋಪಾಲ್ ಶೆಟ್ಟಿ, ಹಾಗೂ ಘಟಕದ ಪದಾಧಿಕಾರಿಗಳು ಸೇರಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಪಂಚಮ ಪಟ್ಲ ಸಂಭ್ರಮಕ್ಕೆ ಶುಭಕೋರಿದರು.

ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ನೆರೆದ ಎಲ್ಲ ಕಲಾಭಿಮಾನಿ ಬಂಧುಗಳನ್ನು ಸ್ವಾಗತಿಸಿದರು‌. ಸಂಚಾಲಕ ಮೋಹನ್ ಎಡನೀರು ಹಾಗೂ ಖಜಾಂಚಿ ಹೇಮಂತ್ ಸಾಲ್ಯಾನ್ ಸಮಾರಂಭದ ಸಂಯೋಜನೆಯಲ್ಲಿ ಸಹಕರಿಸಿದರು. ಪೂಜಾ ವಿಧಿ ವಿಧಾನಗಳನ್ನು ರಾಮ್ ಪ್ರಸಾದ್ ಅಮ್ಮೆನಡ್ಕ ನೆರವೇರಿಸಿದರು. ನೂರಾರು ಕಲಾಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.‌ ಸಂಚಾಲಕ ನವೀನ್ ಭಂಡಾರಿ ವಂದನಾರ್ಪಣೆ ಗೈದರು. ಯಕ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಕರಾಗಿ ಸಹಕರಿಸಿದರು‌‌.

ಈ ಬಾರಿಯ ಪಟ್ಲ ಸಂಭ್ರಮದ ವಿಶೇಷ ಆಕರ್ಷಣೆ – ತಾಯ್ನಾಡ ದಿಗ್ಗಜ ಕಲಾವಿದರಾದ ದಿವಾಕರ್ ರೈ ಸಂಪಾಜೆ, ಸಂತೋಷ್‌ ಕುಮಾರ್ ಮಾನ್ಯ, ಮನೀಷ್ ಪಾಟಾಳಿ, ಶಿವಾನಂದ ಶೆಟ್ಟಿ ಪೆರ್ಲ, ನರೇಂದ್ರ ಸುವರ್ಣ, ಸೂರಜ್ ಆಚಾರ್ಯ, ಮಯೂರ್ ನಾಯ್ಕ ಭಾಗವಹಿಸಲಿದ್ದಾರೆ. ಜೊತೆಗೆ ಘಟಕದ ಅಧ್ಯಕ್ಷ ದೀಪಕ್ ರಾವ್ ಪೇಜಾವರ ಶ್ರೀ ದೇವಿಯ ಪಾತ್ರದಲ್ಲಿ ರಂಗಭೂಮಿಯನ್ನು ಅಲಂಕರಿಸಲಿದ್ದಾರೆ. ಸಮಾರಂಭದ ಕೊನೆಯಲ್ಲಿ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here