ಪುತ್ತೂರಿನ ಪಡೀಲ್‌ನಲ್ಲಿ ನಿಯಂತ್ರಣ ತಪ್ಪಿದ ಲಾರಿ ಅಂಗಡಿಗೆ ಡಿಕ್ಕಿ

0
20

ಪುತ್ತೂರು : ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ರಸ್ತೆ ಬದಿಯ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಆಕ್ಟಿವಾಗೆ ಡಿಕ್ಕಿ ಹೊಡೆದು ಬಳಿಕ ನೇರವಾಗಿ ಅಂಗಡಿಗೆ ನುಗ್ಗಿದ ಘಟನೆ ಪುತ್ತೂರಿನ ಪಡೀಲ್‌ನಲ್ಲಿ ನಡೆದಿದೆ.

ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಲಾರಿಯು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮೊದಲು ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಆಕ್ಟಿವಾಗೆ ಡಿಕ್ಕಿ ಹೊಡೆದು, ನಂತರ ಅಂಗಡಿಗೆ ನುಗ್ಗಿದೆ. ಘಟನೆಯ ವೇಳೆ ಅಂಗಡಿಯಲ್ಲಿ ಹಾಗೂ ರಸ್ತೆಯಲ್ಲಿ ಜನರ ಸಂಚಾರ ಕಡಿಮೆ ಇದ್ದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

ಅವಘಡದಿಂದ ಆಕ್ಟಿವಾ, ಲಾರಿ ಹಾಗೂ ಅಂಗಡಿಗೆ ಹಾನಿಯಾಗಿದೆ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಕರಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆ ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆ ಆರಂಭಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.