ಉಡುಪಿ: ಗೀತಾ ಜಯಂತಿ ಪ್ರಯುಕ್ತ ಕೃಷ್ಣ ಮಠದಲ್ಲಿ ನ.8ರಿಂದ ಡಿ.7ರವರೆಗೆ ಬೃಹತ್ ಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ನ.28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಲಕ್ಷ ಕಂಠ ಗೀತಾಪಾರಾಯಣ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.8ರಂದು ಸಾಯಂಕಾಲ 4.30ಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೀತೋತ್ಸವ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಪ್ರಧಾನಿ ಪ್ರಥಮ ಬಾರಿಗೆ ಆಗಮನ
2008ರಲ್ಲಿ ಗುಜರಾತ್ ಸಿಎಂ ಸ್ಥಾನದಲ್ಲಿದ್ದಾಗ ನರೇಂದ್ರ ಮೋದಿಯವರು ನಮ್ಮ ಪರ್ಯಾಯ ಸಂದರ್ಭದಲ್ಲಿ ಕೃಷ್ಣ ಮಠಕ್ಕೆ ಆಗಮಿಸಿದ್ದರು. 16 ವರ್ಷದ ಬಳಿಕ ಮತ್ತೆ ಪ್ರಧಾನಿಯಾಗಿ ಕೃಷ್ಣ ದರ್ಶನಕ್ಕೆ ಬರುತ್ತಿದ್ದಾರೆ. ಬೈಲಕೆರೆ ಮೈದಾನದಲ್ಲಿ ನ.28ರಂದು ಬೆಳಗ್ಗೆ 9ರಿಂದ ಲಕ್ಷ ಕಂಠ ಗೀತಾಪಾರಾಯಣ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ಕೃಷ್ಣ ಮಠಕ್ಕೆ ಆಗಮಿಸಿ, ಸುವರ್ಣ ತೀರ್ಥ ಮಂಟಪ ಮತ್ತು ಚಿನ್ನದ ಕನಕನ ಕಿಂಡಿ ಉದ್ಘಾಟಿಸಲಿದ್ದಾರೆ. ನಂತರ ಗೀತಾಮಂದಿರದಲ್ಲಿ ಪ್ರಸಾದ ಸ್ವೀಕರಿಸಿ, ಸಭಾ ವೇದಿಕೆಗೆ ಆಗಮಿಸಲಿದ್ದಾರೆ. ಗೀತೆಯ ಕೊನೆಯ 10 ಶ್ಲೋಕಗಳನ್ನು ಪಠಿಸುವ ಮೂಲಕ ಪಾರಾಯಣವನ್ನು ಕೃಷ್ಣನಿಗೆ ಸಮರ್ಪಿಸಲಿದ್ದಾರೆ. ನಂತರ ಪ್ರಧಾನಿಯವರನ್ನು ಮಠದ ವತಿಯಿಂದ ಸನ್ಮಾನಿಸಲಾಗುವುದು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್ ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ 1 ಲಕ್ಷ ಜನರಿಗೆ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ನ.29ರಂದು 18 ಕುಂಡಗಳಲ್ಲಿ ಗೀತಾ ಮಹಾ ಯಾಗ ನಡೆಯಲಿದೆ. ಡಿ7ರಂದು ಪುತ್ತಿಗೆ ವಿದ್ಯಾಪಿಠದ 38ನೇ ಟಿಕೋತ್ಸವ, ಗೀತಾಭಾಷ್ಯ ಪಾಠದ ಮಂಗಲೋತ್ಸವ, ಸಾಯಂಕಾಲ 5ಕ್ಕೆ ಗೀತೋತ್ಸವ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಮಠದ ದಿವಾನ್ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸುಪ್ರಸಾದ್ ಶೆಟ್ಟಿ, ರಮೇಶ್ ಭಟ್ ಭಾಗವಹಿಸಿದ್ದರು.

