ಕುಂದಾಪುರದಲ್ಲಿ ಬಸ್ಸಿನ ಕೊರತೆ, ವಿದ್ಯಾರ್ಥಿಗಳ ಪರದಾಟ

0
59


ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಬಸ್ಸಿನ ಕೊರತೆಯಿಂದ ಪರದಾಡುತ್ತಿರುವ ಘಟನೆಗಳು ಕಂಡುಬರುತ್ತಿವೆ. ಕಳೆದ ಕೆಲವು ದಿನಗಳಿಂದ ಪೊಲೀಸ್ ಇಲಾಖೆ ನಿಗದಿತ ಸಂಖ್ಯೆಯಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳಿಗೆ ಪೆನಾಲ್ಟಿ ವಿಧಿಸುತ್ತಿದ್ದು, ಪ್ರಯಾಣಿಕರನ್ನು ಮಧ್ಯದಲ್ಲೇ ಇಳಿಸುತ್ತಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ತೊಂದರೆಯಾಗಿದೆ. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಬೇಕಾದ ವಿದ್ಯಾರ್ಥಿಗಳು ಬಸ್ ಸಿಗದೆ ನಡೆದು, ಅಥವಾ ಆಟೋಗಳಲ್ಲಿ ಅತಿ ಹೆಚ್ಚು ಹಣ ನೀಡಿ ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆ ಜನವಾದಿ ಮಹಿಳಾ ಸಂಘಟನೆ (JMS) ಕುಂದಾಪುರ ಮತ್ತು ಬೈಂದೂರು ತಾಲೂಕು ಸಮಿತಿಗಳು ಜಿಲ್ಲಾ ಆಡಳಿತದ ಗಮನಕ್ಕೆ ಈ ವಿಷಯವನ್ನು ತಂದು, ತಕ್ಷಣ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿವೆ. ಅಗತ್ಯವಿರುವ ಎಲ್ಲಾ ಗ್ರಾಮಾಂತರ ಮಾರ್ಗಗಳಲ್ಲಿ ಕೆಎಸ್ಆರ್ಟಿಸಿ ಬಸ್‌ಗಳನ್ನು ಓಡಿಸಲು JMS ಸಂಘಟನೆಯ ಆಗ್ರಹಿಸಿದೆ.
ಈಗಾಗಲೇ ಅನೇಕ ಗ್ರಾಮಾಂತರ ಪ್ರದೇಶಗಳಿಗೆ ಕೆಎಸ್ಆರ್ಟಿಸಿ ಬಸ್‌ಗಳ ಅಗತ್ಯವಿದೆ. ಆದರೆ ಖಾಸಗಿ ಬಸ್ ಮಾಲೀಕರು ಆ ಮಾರ್ಗಗಳಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸದಂತೆ ತಡೆಆಜ್ಞೆ ತರುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣಿಸುವ ಹಕ್ಕು ಗ್ರಾಮಾಂತರ ಪ್ರದೇಶಗಳಲ್ಲಿಯೂ ಸಿಗಬೇಕಾದ್ದರಿಂದ, ಎಲ್ಲರಿಗೂ ಈ ಸೌಲಭ್ಯ ದೊರೆಯುವಂತೆ JMS ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳು ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಂಡಿವೆ ಎಂದು ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here