ಕಾರ್ಕಳ ಹೂವಿನ ಬೆಳೆಗಾರರ ಸಹಕಾರಿ ಸಂಘದ ರಂಗನಪಲ್ಕೆ ವಿಸ್ತರಣಾ ಶಾಖೆಯ ಲೋಕಾರ್ಪಣೆ

0
50


ಹೂವಿನ ಬೆಳೆಗಾರರ ಸಹಕಾರಿ ಸಂಘ ರಾಜ್ಯಕ್ಕೆ ಮಾದರಿ : ಫಾ. ಹೆರಾಲ್ಡ್‌ ಪಿರೇರಾ

ಬೈಲೂರು (ಕಾರ್ಕಳ) : ಜಗತ್ತಿಗೆ ಬೆಳಕು ನೀಡುವ ಸೇವೆ ಹೂವಿನ ಬೆಳೆಗಾರರ ಸಂಘದಿಂದ ನಡೆಯುತ್ತಿದೆ. ಸಮಾಜದ ಜನತೆಗೆ ಸಹಕಾರದ ಜೊತೆಗೆ ಜೀವನಕ್ಕೆ ಬೆಳಕು ನೀಡುತ್ತಿದೆ, ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯಾಗುತ್ತಿರುವ ಜೊತೆಗೆ ರಾಜ್ಯದ ಮಾದರಿ ಸಂಸ್ಥೆಯಾಗಿ ಬೆಳಗುತ್ತಿದೆ, ಗ್ರಾಮೀಣ ಪ್ರದೇಶದ ಜನತೆಗೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಕಣಜಾರು ಚರ್ಚ್‌ ಧರ್ಮಗುರು ಫಾ. ಹೆರಾಲ್ಡ್‌ ಪಿರೇರಾ ಹೇಳಿದರು.
ಅವರು ಶುಕ್ರವಾರ ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ ರಂಗನಪಲ್ಕೆ ವಿಸ್ತರಣಾ ಶಾಖೆಯ ಲೋಕಾರ್ಪಣೆ ಸಂಭ್ರಮದಲ್ಲಿ ಆಶೀರ್ವಚನ ನೀಡಿದರು.
ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ ರಂಗನಪಲ್ಕೆ ವಿಸ್ತರಣಾ ಶಾಖೆಯ ಲೋಕಾರ್ಪಣೆ ಮಾಡಿದ ಸಿಂಡಿಕೇಟ್‌ ಬ್ಯಾಂಕ್‌ ನಿವೃತ್ತ ಕಾನೂನು ಅಧಿಕಾರಿ ಕೆ.ವಿ.ಭಟ್‌ ಮಾತನಾಡಿ ನಾವು ಉತ್ತಮವಾಗಿ ಪರೋಪಕಾರಿಯಾಗಿ ಬದುಕಿದಾಗ ಮಾತ್ರ ನಮ್ಮ ಬದುಕಿಗೊಂದು ಮೌಲ್ಯ ದೊರೆಯುತ್ತದೆ, ಸಾರ್ಥಕ ಜೀವನವಾಗುತ್ತದೆ. ಹೂವು ಎಲ್ಲರಿಗೂ ಬೇಕಾದಂತೆ ಹೂವಿನ ಬೆಳೆಗಾರರ ಸಹಕಾರಿ ಸಂಘ ಕೂಡ ಎಲ್ಲರಿಗೂ ಬೇಕಾದಂತೆ ಬೆಳೆಯಲಿ, ತಾವೆಲ್ಲರೂ ಸೇರಿ ಬೆಳಗಿಸಿ ಮುನ್ನಡೆಸಿರಿ, ಸಂಸ್ಥೆಯು ಅತ್ಯುತ್ತಮವಾಗಿ ಬೆಳಗಲಿ, ಹಣವನ್ನು ನಾವು ಗಳಿಸಿ ಉಳಿಸಬೇಕು ಮತ್ತೇ ಬಳಕೆ ಮಾಡಬೇಕು, ಆಗ ಹಣದ ಮೌಲ್ಯ ಜಾಸ್ತಿಯಾಗುತ್ತದೆ, ಮತ್ತೇ ಅದೇ ನಮ್ಮನ್ನು ಬದುಕಿಸುತ್ತದೆ ಎಂದು ಶುಭ ಹಾರೈಸಿದರು.
ರಂಗನಪಲ್ಕೆ ಕೊಂಕಣ್‌ ಕ್ಯಾಥೋಲಿಕ್‌ ವಿವಿದೋದ್ಧೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಪೀಟರ್‌ ಫೇರ್ನಾಂಡಿಸ್‌ ಮಾತನಾಡಿ ಹಣ ಇದ್ದರೆ ಮಾತ್ರ ಶ್ರೀಮಂತರಲ್ಲ. ಜನಸೇವೆ, ನಗುಮುಖದ ಸೇವೆ, ಪರೋಪಕಾರ, ಬಡವರಿಗೆ ಸಹಕಾರ ಮಾಡುವ ಮನಸ್ಸು ಇದ್ದರೆ ಮಾತ್ರ ಶ್ರೀಮಂತರು. ಇಂದು ಸಹಕಾರ ಸಂಘಗಳು ಬಡವರಿಗೆ ಕಿರು ಸಾಲ ನೀಡುವ ಮೂಲಕ ನೆರವಾಗಿ ಶ್ರೀಮಂತ ಸಂಘಗಳಾಗಿವೆ, ಜನರ ಕಷ್ಟಗಳಿಗೆ ಸ್ಪಂದನೆ ನೀಡಿ ಜನತೆ ಸಹಕಾರ ಸಂಘಗಳತ್ತ ಮುಖ ಮಾಡುತ್ತಿದ್ದಾರೆ. ಆ ಮೂಲಕ ಸಹಕಾರ ಸಂಘಗಳನ್ನು ಬೆಳೆಸುತ್ತಿದ್ದಾರೆ ಎಂದರು.
ಹೂವಿನ ಬೆಳೆಗಾರರಿಗೆ ಸಹಕಾರದ ಜೊತೆ ಬ್ಯಾಂಕಿಂಗ್ ವ್ಯವಹಾರ : ಫ್ರಾನ್ಸಿಸ್ ಡಿಸೋಜ.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮಾತನಾಡಿ
ರಾಜ್ಯದಲ್ಲಿ ಹೊಸ ಕಲ್ಪನೆಯಾಗಿರುವ ಹೂವಿನಬೆಳೆಗಾರರ ಸಹಕಾರ ಸಂಘವು ಹೂವಿನ ಬೆಳೆಗಾರರ ಸಂಕಷ್ಟಗಳನ್ನು ಸರ್ಕಾರದ ಗಮನ ಸೆಳೆದು ಸಿಗುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದೆ, ಸಹಕಾರ, ಸೇವೆಯ ಮೂಲಕ ಪ್ರಸಿದ್ಧಿ ಪಡೆದು ಉಡುಪಿ ಜಿಲ್ಲಾ ಮಟ್ಟದ ಮಾನ್ಯತೆ ಪಡೆದು ಕಾರ್ಕಳದಲ್ಲಿ ಕೇಂದ್ರ ಕಚೇರಿಯ ಜೊತೆಗೆ ಹಣಕಾಸು ವ್ಯವಹಾರ ನಡೆಸುತ್ತಿದೆ, ಹೆಬ್ರಿಯಲ್ಲೂ ಶಾಖೆಯನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಶಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದೆ, ಬೈಲೂರು ರಂಗನಪಲ್ಕೆಯಲ್ಲಿ ವಿಸ್ತರಣಾ ಶಾಖೆಯನ್ನು ತೆರೆಯಲಾಗಿದೆ. ಮಲ್ಲಿಗೆ ಬೆಳೆಗಾರರ ಅನುಕೂಲಕ್ಕಾಗಿ ಮುಂದೆ ಇನ್ನಷ್ಟು ಹೊಸ ಶಾಖೆಯನ್ನು ತೆರೆಯುವ ಉದ್ದೇಶವನ್ನು ಹೊಂದಿದೆ ಎಂದರು.
ಹೂವಿನ ಬೆಳೆಗಾರರಿಗೆ ಸಂಘವು ಸಕಾಲದಲ್ಲಿ ಹೂವಿನ ಗಿಡ ನಾಟಿಕ್ರಮ, ಆರೈಕೆ, ಕಾಯಿಲೆ, ಗಿಡಗಳ ಮದ್ದು, ವ್ಯಾಪಾರ ವ್ಯವಹಾರದ ಸಮಗ್ರ ಮಾಹಿತಿಯನ್ನು ವಿವಿಧ ಮಾಧ್ಯಮಗಳ ಮೂಲಕ ಕಾಲ ಕಾಲಕ್ಕೆ ನೀಡುತ್ತಿದೆ, ನಮ್ಮ ಸಹಕಾರ ಸಂಘವು ಹೂವಿನ ಬೆಳೆಗಾರರ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಸರಕಾರದಿಂದ ಕಾಲಕಾಲಕ್ಕೆ ಸಿಗುವ ಸವಲತ್ತುಗಳನ್ನು ಬೆಳೆಗಾರರಿಗೆ ದೊರಕಿಸಿ ಕೊಡಲು ಶ್ರಮಿಸುತ್ತಿದೆ. ಸಂಘವು ಎಲ್ಲಾ ವರ್ಗದ ಜನ ಸಾಮಾನ್ಯರಿಗಾಗಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತಿದೆ. ತಾವು ಎಲ್ಲರೂ ಸೇರಿ ಸಂಘವನ್ನು ಬೆಳೆಸಿ ಮುನ್ನಡೆಸಬೇಕು ಎಂದು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಮನವಿ ಮಾಡಿದರು.
ಸಂಘವು ಸದಸ್ಯರ ನಡುವೆ ಮಿತವ್ಯಯ, ಪರಸ್ಪರ ಸ್ವಸಹಾಯ ಮತ್ತು ಸಹಕಾರದ ಮನೋಭಾವವನ್ನು ಉತ್ತೇಜಿಸಲು ಹಾಗೂ ನಿಯಮಿತ ಉಳಿತಾಯವನ್ನು ಶಕ್ತಿ ಹೆಸರಿನ ಸ್ವಸಹಾಯ ಸಂಘವನ್ನು ರಚಿಸಿದ್ದು ೨೭ ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇನ್ನಷ್ಟು ಸ್ವಸಹಾಯ ಸಂಘಗಳನ್ನು ತೆರೆಯುವುದು, ಹೆಬ್ರಿಯಲ್ಲಿ ಮಲ್ಲಿಗೆ ಮಾರಾಟ ಮಳಿಗೆ ತೆರೆಯುವ ಉದ್ದೇಶ ಹೊಂದಲಾಗಿದೆ. ಸಂಘದಲ್ಲಿ ಇ ಸ್ಟಾಂಪಿಂಗ್, ಪಾನ್ ಕಾರ್ಡ್,ಮಲ್ಲಿಗೆ ಗಿಡ ಸಹಿತ ವಿವಿಧ ಸೌಲಭ್ಯಗಳು ಕೂಡ ದೊರೆಯುತ್ತಿದೆ, ಮಲ್ಲಿಗೆ ಬೆಳೆಗಾರರ ಸಹಿತ ಸರ್ವರೂ ಸೇರಿ ನಮ್ಮ ಸಂಸ್ಥೆಯಲ್ಲಿ ವ್ಯವಹಾರ ನಡೆಸಿ ಸಂಸ್ಥೆಯನ್ನು ಬೆಳೆಸಿ ಮುನ್ನಡೆಸುವಂತೆ ಫ್ರಾನ್ಸಿಸ್ ಡಿಸೋಜಾ ಮನವಿ ಮಾಡಿದರು. ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಹಿರಿಯರಾದ ವಿಶ್ವನಾಥ ಭಟ್‌, ರಂಗನಪಲ್ಕೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿನ್ಸಂಟ್‌ ಲಿಯೋ ಡೇಸಾ, ಕಟ್ಟಡದ ಮಾಲಕ ಉದ್ಯಮಿ ಐವನ್‌ ಮಿರಾಂದ, ಬೈಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಪೂಜಾರಿ, ಹಿರಿಯ ಸಹಕಾರಿ ಧುರೀಣೆ ಫ್ಲೋರಾ ಮಂಡೋನ್ಸಾ, ಹೂವಿನ ಬೆಳೆಗಾರರ ಸಹಕಾರಿ ಸಂಘದ ನಿರ್ದೇಶಕರಾದ ಪ್ಲಾವಿಯಾ ಅರಾನ್ಹ, ಸುಕುಮಾರ್ ಮುನಿಯಾಲ್, ಮಂದಾರ ಆಚಾರ್ಯ ಮಾರಾಳಿ ನಾಲ್ಕೂರು, ರಾಘವೇಂದ್ರ ಪೈ, ಅಮರ್‌, ಸಂಘದ ಕಾರ್ಯದರ್ಶಿ ಲತಾ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೆಬ್ರಿ ಶಾಖೆಯ ರಕ್ಷಿತಾ ಸ್ವಾಗತಿಸಿದರು. ಪ್ರೀತಿ ವಂದಿಸಿದರು. ಜಾರ್ಜ್‌ ಡೇಸಾ ನಿರೂಪಿಸಿದರು. ಸಿಬ್ಬಂದ್ಧಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here