ಹುಟ್ಟಿನಿಂದ ಮಾನವ ಸಾಮಾನ್ಯನಾಗಿರುತ್ತಾನೆ. ಸಂಸ್ಕಾರದಿಂದ ವಿಶ್ವಮಾನವನಾಗುತ್ತಾನೆ. ಮಾನವೀಯತೆಯ ಗುಣಗಳನ್ನು ಬಾಲ್ಯದಲ್ಲಿಯೇ ಅಳವಡಿಸಿಕೊಳ್ಳುವುದರಿಂದ ಸಜ್ಜನ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳು ಬದುಕಿಗೆ ದಾರಿ ದೀಪ ಎಂದು ಕಡಂದಲೆಶ್ರೀಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯ ಪ್ರಧಾನ ಅಧ್ಯಾಪಕ ಶ್ರೀ ದಿನಕರ ಕುಂಭಾಶಿ ಮಾರ್ಗದರ್ಶನದ ಮಾತುಗಳನ್ನು ಆಡಿದರು.
ಅವರು ಮೂಡುಬಿದಿರೆಯ ಕಲ್ಲ ಬಿಟ್ಟು ಮುರಾರ್ಜಿ ವಸತಿ ಪ್ರೌಢಶಾಲೆಯಲ್ಲಿ ಮೂಡುಬಿದಿರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಸಾಹಿತ್ಯ ಚಿಂತನ ಸಮಾರಂಭದಲ್ಲಿ ಮಾನವ ಜನ್ಮ ಮಾನವ ಧರ್ಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.f
ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದರಿ ಹೋಬಳಿ ಘಟಕದ ಅಧ್ಯಕ್ಷರಾದ ಡಾ. ರಾಮಕೃಷ್ಣ ಶಿರೂರು ಪ್ರಾಸ್ತಾವಿಕ ಮಾತನಾಡಿ ಸಾಹಿತ್ಯ ಪರಿಷತ್ತಿನ ಹಿನ್ನೆಲೆ ಮತ್ತು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಎಸ್. ಬಿ. ಹಿರೇಮಠ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಅಭಿನಂದನೆಯ ಮಾತುಗಳನ್ನು ಆಡಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆಯನ್ನು ಮಾಡಿ ಫಲಪುಷ್ಪಗಳನ್ನು ಅರ್ಪಿಸುವುದರ ಮೂಲಕ ತಾಯಿಯ ಆಶೀರ್ವಾದವನ್ನು ಪಡೆಯಲಾಯಿತು.
ವಿದ್ಯಾರ್ಥಿಗಳ ಶಿಸ್ತು ಬದ್ಧ ಜೀವನಕ್ಕೆ ಭದ್ರಬುನಾದಿಯನ್ನು ಕಲ್ಪಿಸಿ ಕೊಡುತ್ತಿರುವ ಮುರಾರ್ಜಿ ಶಾಲೆಯ ಸಂಸ್ಕಾರ ಯುಕ್ತ ಶಿಕ್ಷಣಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಪ್ರಭಾರ ನಿಲಯ ಪಾಲಕಿ ಶ್ರೀಮತಿ ಸರಿತಾ, ಶಾಲಾ ನಾಯಕಿ ಕುಮಾರಿ ದ್ಯಾಮವ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ಅಧ್ಯಾಪಕಿ ಶ್ರೀಮತಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಅಧ್ಯಾಪಕಿ ಶ್ರೀಮತಿ ಹೇಮಲತಾ ಏ.ಎಸ್. ಧನ್ಯವಾದ ಸಮರ್ಪಣೆ ಸಲ್ಲಿಸಿದರು.

