ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಸಾಧ್ಯತೆ

0
68


ಉಡುಪಿ::ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನ. 28ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಪೂರ್ವದಲ್ಲಿ ಪ್ರಧಾನಿಯವರು ನಗರದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ.
ನ. 28ರ ಬೆಳಗ್ಗೆ 9ಕ್ಕೆ ಆದಿ ಉಡುಪಿಯ ಹೆಲಿಪ್ಯಾಡ್ ಗೆ ಪ್ರಧಾನಿ ಮೋದಿಯವರು ಆಗಮಿಸಲಿದ್ದು ಅಲ್ಲಿಂದ ರಸ್ತೆ ಮಾರ್ಗವಾಗಿ ಶ್ರೀ ಕೃಷ್ಣಮಠಕ್ಕೆ ತೆರಳಲಿದ್ದಾರೆ‌. ಈ ಮಧ್ಯೆ ಬನ್ನಂಜೆಯ ಡಾಣ ವಿ.ಎಸ್. ಆಚಾರ್ಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರಿನಿಂದ ಬನ್ನಂಜೆ, ಸಿರಿಬೀಡು, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸಂಕದವರೆಗೂ ರೋಡ್ ಶೋ ನಡೆಸುವ ಸಾಧ್ಯತೆ ಹೆಚ್ಚಿದೆ.

ಪ್ರಧಾನಿ ಮೋದಿಯವರ ಕಾರ್ಯಕ್ರಮ ಹಾಗೂ ರೋಡ್ ಶೋ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿಕೊಳ್ಳುತ್ತಿದೆ. ಶ್ರೀ ಮಠದಲ್ಲಿಯೂ ಇದಕ್ಕೆ ಸಿದ್ದತೆ ನಡೆಯುತ್ತಿದೆ. ಲಕ್ಷಕಂಠ ಗೀತಾ ಪಾರಾಯಣ ನಡೆಯುವ ಸ್ಥಳದ ಸ್ವಚ್ಛತ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ರೋಡ್ ಶೋ ಪೂರ್ವಭಾವಿಯಾಗಿ ಈಗಾಗಲೇ ಬಿಜೆಪಿ ಪ್ರಮುಖರ ಸಭೆಯನ್ನು ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾಗಿದೆ. ಹಾಗೆಯೇ ಎಲ್ಲ ವಾರ್ಡ್, ಬೂತ್ ಗಳಿಗೂ ಸೂಚನೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿ ಹೆಲಿಪಾಡ್ ನಲ್ಲಿ ಸ್ವಚ್ಛತಾ ಕಾರ್ಯ ಮತ್ತು ಆದಿಉಡುಪಿ  ಕರಾವಳಿ ಬೈಪಾಸ್ ರಸ್ತೆ ಡಾಂಬರೀಕರಣ, ನಗರದ ಪ್ರಮುಖ ರಸ್ತೆಗಳಲ್ಲಿ ಪ್ಯಾಚ್ ವರ್ಕ್, ಸ್ವಚ್ಛತೆ ಇತ್ಯಾದಿ ಆರಂಭವಾಗಿದೆ. ಭದ್ರತಾ ಸಿಬಂದಿ ಈಗಾಗಲೇ ಒಂದು ಹಂತದ ಪರಿಶೀಲನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ‌. ಅಧಿಕೃತ ಮೂಲಗಳಿಂದ ಅಂತಿಮ ಸೂಚನೆ ಬಂದ ಮೇಲೆ ರೋಡ್ ಶೋಗೆ ಇನ್ನಷ್ಟು ವ್ಯವಸ್ಥೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here