ಉಡುಪಿ : ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ದೈಹಿಕ–ಮಾನಸಿಕ ಹಿಂಸಾಚಾರದ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ವಿದ್ಯಾರ್ಥಿಗಳಿಗೆ ಜನಿವಾರ ಹಾಗೂ ರಕ್ಷಾಸೂತ್ರ(ಕೈದಾರ) ಗಳನ್ನು ಬಲವಂತವಾಗಿ ತೆಗೆಸುವಂತೆ ಮಾಡಿ, ಅವರಿಗೆ ಬಸ್ಕಿ ಹೊಡೆಯಲು ಆದೇಶಿಸಿದ್ದಾಗಿ ಆರೋಪಿಸಲಾಗಿದೆ.
ಮಕ್ಕಳು ಈ ವಿಷಯವನ್ನು ತಮ್ಮ ಪೋಷಕರಿಗೆ ತಿಳಿಸಿದ ನಂತರ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿ ವಿಚಾರಿಸಿದಾಗ, ಶಿಕ್ಷಕರ ತಪ್ಪು ವರ್ತನೆ ದೃಢಪಟ್ಟ ಕಾರಣ, ಶಾಲಾ ಪ್ರಾಂಶುಪಾಲರು ಸಂಬಂಧಿತ ಶಿಕ್ಷಕರನ್ನು ಕರ್ತವ್ಯದಿಂದ ವಜಾಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಘಟನೆ ಮಕ್ಕಳ ಹಕ್ಕುಗಳ ಸಂರಕ್ಷಣಾ ಅಧಿನಿಯಮ 2005, ಬಾಲ್ಯ ನ್ಯಾಯ ಅಧಿನಿಯಮ 2015 ಹಾಗೂ IPC ಕಲಂ 295A, 352, 509 ಸೇರಿ ಹಲವು ಕಾನೂನುಗಳ ಉಲ್ಲಂಘನೆಗೆ ಒಳಪಟ್ಟಿರುವುದಾಗಿ ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ. ಕೇವಲ ವಜಾಗೊಳಿಸುವುದು ಸಾಕಾಗುವುದಿಲ್ಲ ಎಂದು ಸಮಿತಿ ಪ್ರತಿಕ್ರಿಯಿಸಿದ್ದು, ಆರೋಪಿಗಳ ವಿರುದ್ಧ ತಕ್ಷಣ FIR ದಾಖಲಿಸಿ ಬಂಧನ ಕ್ರಮ ಕೈಗೊಳ್ಳುವಂತೆ ಬೇಡಿಕೆ ಮಾಡಿದೆ.
ಇದೇ ಸಂದರ್ಭದಲ್ಲಿ ಪೀಡಿತ ವಿದ್ಯಾರ್ಥಿಗಳ ಹೇಳಿಕೆಗಳನ್ನು ಪಡೆಯಲು ಬಾಲ ಕಲ್ಯಾಣ ಸಮಿತಿಯ ಮೂಲಕ ವಿಚಾರಣೆ ಆರಂಭಿಸುವುದು, ಶಾಲಾ ಸಿಬ್ಬಂದಿಗಳಿಗೆ ಮಕ್ಕಳ ಹಕ್ಕುಗಳ ಕುರಿತು ತರಬೇತಿ ನೀಡುವುದು, ಮತ್ತು ಪೀಡಿತ ವಿದ್ಯಾರ್ಥಿಗಳಿಗೆ ಸಮಾಲೋಚನಾ ಸಹಾಯ ಒದಗಿಸುವಂತೆ ಹಿಂದೂ ಜನಜಾಗೃತಿ ಸಮಿತಿಯು ತಾಲೂಕು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಅನೇಕ ಧರ್ಮ ಪ್ರೇಮಿಗಳು ಭಾಗಿಯಾಗಿದ್ದರು.
ಘಟನೆ ಸ್ಥಳೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, “ಇದು ಕೇವಲ ಶಾಲಾ ಶಿಸ್ತು ಪ್ರಶ್ನೆಯಲ್ಲ; ಸಂವೇದನಾಶೀಲ ವಿದ್ಯಾರ್ಥಿಗಳ ಧರ್ಮ–ಸಂಸ್ಕೃತಿಗಳಿಗೆ ಧಕ್ಕೆ ತರುವ ಕ್ರೂರ ಕೃತ್ಯ” ಎಂದು ಪ್ರದೇಶದ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

