‘ಯೋಜನೆ’ ಎಂಬ ಕಾಯಿಲೆಯಿಂದ ಕವಲೊಡೆದ ದುರಂತ: ದೈವಗಳ ನೆಲದಲ್ಲಿ ಇಂದಿಗೂ ಮೌನ ಮತ್ತು ತ್ಯಾಜ್ಯದ ನೆರಳು
ವರದಿ ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ
ತುಳುನಾಡು : ಅಭಿವೃದ್ಧಿ ಎಂದರೆ ಪ್ರಗತಿ, ಬೆಳಕು, ಸುಧಾರಣೆ. ಆದರೆ, ಮಂಗಳೂರಿನ ಮಂದಾರಕ್ಕೆ ‘ಅಭಿವೃದ್ಧಿ’ ಎಂದರೆ 2019ರ ಆಗಸ್ಟ್ 6ರಂದು ಸುಮಾರು 10 ಲಕ್ಷ ಟನ್ ವಿಷವಾಗಿ ಸುರಿದುಬಂದ ತ್ಯಾಜ್ಯದ ಮಳೆ!
ಈ ನೆಲವು ಇಂದು “ಅಭಿವೃದ್ಧಿಯ ರೋಗಕ್ಕೆ ಸಿಲುಕಿ” ನಡುಗುತ್ತಿದೆ. 6 ವರ್ಷಗಳ ನಂತರವೂ, ಮಂದಾರ ತನ್ನ ಪರಂಪರೆಯ ಆಸ್ತಿಯೊಂದಿಗೆ, ಮಣ್ಣಿನ ಗಾಯವನ್ನು ಹೊತ್ತು ನಿಂತಿದೆ.
ಒಂದು ವಿಪರ್ಯಾಸದ ರೋಗಲಕ್ಷಣ
ಮಂದಾರ, ತುಳುನಾಡಿನ ಪವಿತ್ರ ಪರಂಪರೆಯ ಚೈತನ್ಯ. ಇದು ದೈವಗಳ ನಂಬಿಕೆ, ನಾಗಬನದ ಪಾವಿತ್ರ್ಯ ಮತ್ತು ಕವಿ ಮಂದಾರ ಕೇಶವ ಭಟ್ಟರ ವಾಕ್ಯಗಳು ಸಮ್ಮಿಲನಗೊಂಡಿದ್ದ ಪಾವನ ನೆಲ. ಆದರೆ, “ಯಾವುದೇ ಬೆಲೆ ತೆತ್ತಾದರೂ ನಗರವನ್ನು ಸ್ವಚ್ಛವಾಗಿಡಬೇಕು” ಎಂಬ ಅಭಿವೃದ್ಧಿಯ ಮಹತ್ವಾಕಾಂಕ್ಷೆ ಇಲ್ಲಿ ಮೃತ್ಯು ಶಾಸನವಾಯಿತು.
ಬಹುಕಾಲದ ನಿರ್ಲಕ್ಷ್ಯ, ನಿರ್ವಹಣೆಯ ಕೊರತೆ, ಮತ್ತು ದುರಾಸೆಯ ‘ಯೋಜನೆ’ಗಳು ಸೇರಿ ಈ ರೋಗವನ್ನು ಹುಟ್ಟಿಸಿದವು. ಇದರ ತೀವ್ರ ಲಕ್ಷಣ 2019ರ ಆಗಸ್ಟ್‌ನಲ್ಲಿ ಸ್ಪೋಟಗೊಂಡಿತು – ತ್ಯಾಜ್ಯದ ಅಲೆಗಳು ಪ್ರವಾಹದಂತೆ ಬಂದಾಗ, ದೈವಸ್ಥಾನ, ನಾಗಬನ, ಧರ್ಮಚಾವಡಿ ಮತ್ತು ಪಾರಂಪರಿಕ ಮನೆಗಳು ಅಭಿವೃದ್ಧಿಯ ರೋಗಕ್ಕೆ ಸಿಲುಕಿ ಮೌನದ ಕಿರುಚಾಟ ಮಾಡಿದವು. ಆದರೆ ಯಾರಿಗೆ ಕೇಳಬೇಕು? ಅಭಿವೃದ್ಧಿಯ ಭರಾಟೆಯಲ್ಲಿ ಕಿವಿಗಳು ಅಡ್ರಸ್ ಕಳೆದುಕೊಂಡಿದ್ದವು.
ಪಾರಂಪರಿಕ ಮನೆ – ಕಾವ್ಯದ ಗರ್ಭಗುಡಿ, ಇಂದು ಕುಸಿಯುವ ಮುನ್ನ “ನನ್ನನ್ನು ಉಳಿಸಿ” ಎಂದು ಕೈಚಾಚಿದೆ.
ಧರ್ಮಚಾವಡಿ – ಸಮುದಾಯದ ನ್ಯಾಯದ ಕೇಂದ್ರ, ಇಂದು ಮೌನದ ಗಾಳಿಗೆ ಒರಗುವ ಪ್ರಾಚೀನ ಸಿರಿ.
ನಾಗಬನ – ಪವಿತ್ರ ಅಂಗಳ, ಇನ್ನೂ ಮಣ್ಣು ಶುದ್ಧಿಯಾಗಲು ಗೌರವಕ್ಕಾಗಿ ಕಾಯುತ್ತಿದೆ.
6 ವರ್ಷಗಳ ಚಿಕಿತ್ಸೆ:
ಕೇವಲ ಭರವಸೆಗಳ ಡೋಸ್
ದುರಂತ ಸಂಭವಿಸಿದ ಕೂಡಲೇ, ಅಧಿಕಾರಿಗಳು ಮತ್ತು ರಾಜಕಾರಣಿಗಳು ‘ಚಿಕಿತ್ಸೆ’ಯ ಭರವಸೆಗಳನ್ನು ನೀಡಿದರು. ‘ರೋಗ ಗುಣಪಡಿಸಲಾಗುವುದು’ ಎಂದು ಹೇಳಿ, ಭರವಸೆಗಳ ಡೋಸ್‌ಗಳನ್ನು ಒಂದರ ಮೇಲೊಂದರಂತೆ ನೀಡಿದರು.
ದೈವಸ್ಥಾನ ಪುನಃಸ್ಥಾಪನೆ –
ಭರವಸೆಯ ಡೋಸ್ 1
ನಾಗಬನ ಶುದ್ಧೀಕರಣ, ಮರು ಸ್ಥಾಪನೆ – ಭರವಸೆಯ ಡೋಸ್ 2
ಪಾರಂಪರಿಕ ಮನೆ ರಕ್ಷಣೆ – ಭರವಸೆಯ ಡೋಸ್ 3
ಧರ್ಮ ಚಾವಡಿ ಪುನರ್ ನಿರ್ಮಾಣ – ಭರವಸೆಯ ಡೋಸ್ 4
ಆದರೆ, ಈ ಭರವಸೆಗಳೆಲ್ಲವೂ ನೀರಿನ ಮೇಲಿನ ಬರಹದಂತೆ ಮಾಯವಾದವು. 6 ವರ್ಷಗಳ ನಂತರ, ಮಂದಾರ ಇನ್ನೂ ಗುಣಮುಖವಾಗಿಲ್ಲ. ಚಿಕಿತ್ಸೆಯ ರೂಪದಲ್ಲಿ ಸಿಕ್ಕಿದ್ದು ಕೇವಲ ನನಸಾಗದ ಆಶ್ವಾಸನೆಗಳು ಮಾತ್ರ.
ಇಂದು ಮಂದಾರವು ತುಳುನಾಡಿನ ಮನಸ್ಸಿಗೆ ಕೇಳುತ್ತಿರುವ ಪ್ರಶ್ನೆ ಇದು: ”ಯೋಜನೆಗಳು ಕೇವಲ ಆಶ್ವಾಸನೆಗಷ್ಟೇ ಸೀಮಿತವಾದಾಗ, ಇಚ್ಛಾಶಕ್ತಿಯ ಕೊರತೆ ಇದ್ದಾಗ, ಸಂಸ್ಕೃತಿ, ದೈವ ಮತ್ತು ನೆಲ ಉಳಿಯಲು ಸಾಧ್ಯವೇ?”
ಮಂದಾರದ ಕೂಗು: ತುಳುನಾಡೇ, ಪ್ರತಿಕ್ರಿಯಿಸು! ಮಂದಾರದಲ್ಲಿನ ಮೌನ, ಕೇವಲ ಬಲಿಯಾದ ನೆಲದ ಮೌನವಲ್ಲ. ಇದು ತುಳುನಾಡಿನ ಪರಂಪರೆ ಮತ್ತು ನಂಬಿಕೆಗಳ ಮೇಲಿನ ನಗಣ್ಯ ಭಾವದ ವಿರುದ್ಧದ ಕೂಗು.
ಮಣ್ಣಿಗೆ ಮರುಸ್ಪರ್ಶ ಸಿಗಬೇಕು. ಪರಂಪರೆಯನ್ನು ಉಳಿಸುವ ದೃಢವಾದ ಪ್ರತಿಜ್ಞೆ ಬೇಕು. ದೈವ, ನಾಗ, ಮನೆ, ಮಣ್ಣು – ಈ ನಂಟನ್ನು ಪುನಃ ಕಟ್ಟಬೇಕು
ತುಳುನಾಡೇ, ನೀನು ಪ್ರತಿಕ್ರಿಯಿಸೋ ಸಮಯ ಬಂದಿದೆ. ಭರವಸೆ ಮರೆತವರು ಜಾಗೃತರಾಗಬೇಕು. ಅಭಿವೃದ್ಧಿಯ ‘ರೋಗ’ದಿಂದ ನಡುಗಿದ ಮಂದಾರವನ್ನು ಗುಣಮುಖ ಮಾಡುವ ಪ್ರತಿಜ್ಞೆಯನ್ನು ನಿನ್ನ ಮಕ್ಕಳು ತೆಗೆದುಕೊಳ್ಳುವರೆ?

