ಮುಲ್ಕಿ : ಶಿಕ್ಷಕಿ ವಸಂತಿ ಕುಮಾರಿ – ಶಿಕ್ಷಣ , ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ಅನನ್ಯ ಸಾಧನೆ

0
71

ಮುಲ್ಕಿ ತಾಲ್ಲೂಕಿನ ಕಿಲ್ಪಾಡಿ ಗ್ರಾಮದ ವಸಂತಿ ಕುಮಾರಿ ಅವರು ಶಿಕ್ಷಕಿ, ಕ್ರೀಡಾಳು ಹಾಗೂ ಸಾಮಾಜಿಕ–ಶೈಕ್ಷಣಿಕ ಸೇವಕಿಯಾಗಿ ಗುರುತಿಸಿಕೊಂಡಿರುವ ವಿಶಿಷ್ಟ ವ್ಯಕ್ತಿತ್ವ. 35 ವರ್ಷಗಳ ಬೋಧನಾ ಅನುಭವದೊಂದಿಗೆ ವಿದ್ಯಾರ್ಥಿಗಳ ಹೃದಯ ಗೆದ್ದಿರುವ ಇವರು, ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕಿಲ್ಪಾಡಿ ಗ್ರಾಮದಲ್ಲಿ ಜನಿಸಿದ ವಸಂತಿ ಕುಮಾರಿ ಅವರು, ತಂದೆ ಎಂ. ಪೂವಪ್ಪ ಕೋಟ್ಯಾನ್ ಮತ್ತು ತಾಯಿ ಇಂದಿರಾ ಪಿ. ಸನಿಲ್ ಅವರ ಪುತ್ರಿ . ಪ್ರಸ್ತುತ ಅವರು ತಾವು ಕಲಿತದ್ದೇ ಆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾನಂಪಾಡಿ, ಮುಲ್ಕಿಯಲ್ಲಿ ಕಳೆದ 15 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಪಾರ ಶಿಷ್ಯ ವೃಂದವನ್ನು ಹೊಂದಿರುವ ಅವರು, ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿಯಾಗಿದ್ದಾರೆ.

ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ವಸಂತಿ ಕುಮಾರಿ ಅವರು, ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟದಲ್ಲಿ 2018 ರಿಂದ ನಿರಂತರವಾಗಿ ತ್ರೋಬಾಲ್ ತಂಡವನ್ನು ಮುನ್ನಡೆಸುತ್ತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದರ ಫಲವಾಗಿ ತಂಡವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿದೆ.

ಒಳಾಂಗಣ ಕ್ರೀಡೆಯಾದ ಕೇರಂನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ಸತತ ಮೂರು ವರ್ಷಗಳ ಕಾಲ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಅವರ ಮತ್ತೊಂದು ಗಮನಾರ್ಹ ಸಾಧನೆಯಾಗಿದೆ.

2024–25ನೇ ಸಾಲಿನಲ್ಲಿ ಅವರು ತಾಲೂಕು ಸರಕಾರಿ ನೌಕರರ ಸಂಘದ ತಾಲೂಕು ಪದಾಧಿಕಾರಿಯಾಗಿ ಹಾಗೂ ಸಾಂಸ್ಕೃತಿಕ ಕಾರ್ಯ ಸಮಿತಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು , ಸಂಘಟನಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಕ್ರಿಯವಾಗಿ ಕೈಜೋಡಿಸಿದ್ದಾರೆ.

ಶಿಕ್ಷಣ, ಕ್ರೀಡೆ ಮತ್ತು ಸಮಾಜಸೇವೆಯನ್ನು ಸಮನ್ವಯಗೊಳಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ವಸಂತಿ ಕುಮಾರಿ ಅವರು, ಮುಂದಿನ ಪೀಳಿಗೆಗೆ ಪ್ರೇರಣೆಯಾಗಿರುವುದು ವಿಶೇಷ. ಅವರ ಸೇವೆ ಮತ್ತು ಸಾಧನೆಗಳಿಗೆ ಶಿಕ್ಷಣ ಮತ್ತು ಕ್ರೀಡಾ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

LEAVE A REPLY

Please enter your comment!
Please enter your name here