ಕಾಸರಗೋಡು ರೈಲು ನಿಲ್ದಾಣದಲ್ಲಿ ರೈಲು ಬಡಿದು ಕೊಡಗು ನಿವಾಸಿಯೊರ್ವ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೃತನನ್ನು ಕೊಡಗು ನಿವಾಸಿ ರಾಜೇಶ್ (35) ಎಂದು ಗುರುತಿಸಲಾಗಿದೆ.ರೈಲಿನಿಂದ ಇಳಿದು ಹಳಿ ಮೂಲಕ ಅಡ್ಡ ದಾಟಿ ಮತ್ತೊಂದು ಫ್ಲಾಟ್ಫಾರ್ಮ್ ಏರಲು ಯತ್ನಿಸುತ್ತಿದ್ದ ವೇಳೆ ಗೂಡ್ಸ್ ರೈಲು ಬಡಿದು ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ರಾಜೇಶ್ ಅವರ ತಲೆ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹ ಧರಿಸಿದ್ದ ಅಂಗಿಯ ಜೇಬಿನಲ್ಲಿ ದೊರೆತ ಆಧಾರ್ ಕಾರ್ಡ್ ಆಧಾರದ ಮೇಲೆ ಅವರ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೃತದೇಹದ ಅವಶೇಷಗಳನ್ನು ಸಂಗ್ರಹಿಸಿ ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ರೈಲು ದುರಂತದ ಮಾಹಿತಿ ಮೃತರ ಸಂಬಂಧಿಕರಿಗೆ ರೈಲ್ವೇ ಪೊಲೀಸರು ತಿಳಿಸಿದ್ದಾರೆ.ಹಳಿ ಅಡ್ಡದಾಟುವಾಗ ತೋರಿದ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

