ಉಜಿರೆ : ವಿದ್ಯಾರ್ಥಿಗಳು ಪರಿಶುದ್ಧ ಮನಸ್ಸಿನಿಂದ ನಿರ್ಧಿಷ್ಟ ಗುರಿಯೊಂದಿಗೆ ನಾಯಕತ್ವ ಗುಣ ಹಾಗೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಧರ್ಮಸ್ಥಳದಲ್ಲಿ ಶುಕ್ರವಾರ ಶಾಂತಿವನಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾರ್ತಾಪತ್ರಿಕೆಗಳಲ್ಲಿ ಉಪಯುಕ್ತವಾದ ವಿಶೇಷ ಮಾಹಿತಿ, ಮಾರ್ಗದರ್ಶನ ಮತ್ತು ಸಂದೇಶ ಸಿಗುವುದರಿಂದ ವಾರ್ತಾಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಬೆಳೆಸುವುದಕ್ಕಾಗಿ ಪ್ರತಿವರ್ಷ ಶಾಂತಿವನಟ್ರಸ್ಟ್ ವತಿಯಿಂದ ಲಕ್ಷಾಂತರ ಪುಸ್ತಕಗಳನ್ನು ಪ್ರಕಟಿಸಿ, ಶಾಲೆಗಳಿಗೆ ವಿತರಿಸಿ ರಾಜ್ಯಮಟ್ಟದಲ್ಲಿ ಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಪುರಸ್ಕಾರ ನೀಡಲಾಗುತ್ತದೆ.
ವಾರ್ತಾಪತ್ರಿಕೆಗಳೊಂದಿಗೆ ಇತರ ಮೌಲಿಕ ಕೃತಿಗಳನ್ನು ಓದಿ ಅಕ್ಷಯವಾದ ಜ್ಞಾನ ಭಂಡಾರವನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಹೇಳಿದರು. ಉಡುಪಿಯ ಸಾಹಿತಿ ಸಂಧ್ಯಾ ಶೆಣೈ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಹೆತ್ತವರ ಕನಸು ನನಸು ಮಾಡಬೇಕು. ಎಲ್ಲರೊಂದಿಗೆ ನಗುಮೊಗದಿಂದ ಮುಕ್ತವಾಗಿ ಬೆರೆತು ಮಾತನಾಡಿದಾಗ ಪರಸ್ಪರ ಪ್ರೀತಿ-ವಿಶ್ವಾಸ ಹೆಚ್ಚಾಗುತ್ತದೆ. ಬದುಕಿನಲ್ಲಿ ಸತತ ಪ್ರಯತ್ನ ಮಾಡಿ ಏನಾದರೂ ವಿಶೇಷ ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆ ಮತ್ತು ಶ್ರದ್ಧಾಅಮಿತ್ ಉಪಸ್ಥಿತರಿದ್ದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಜಗನ್ನಾಥ್ ಯು. ಭಾಗವಹಿಸಿದರು. ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ಸ್ವಾಗತಿಸಿದರು. ಅಶೋಕ ಪೂಜಾರಿ ಬಾರ್ಕೂರು ಧನ್ಯವಾದವಿತ್ತರು. ಪಡುಬಿದ್ರೆಯ ಶಿಕ್ಷಕ ರಾಘವೇಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.

