ಕಸ ಹಾಕುವ ಮನಸ್ಥಿತಿ ತೊರೆಯಲು ಕಾರಣ ಕಸ ಹೆಕ್ಕುವ ಆಂದೋಲನ : ಉಮಾನಾಥ ಕೋಟೆಕಾರ್

0
32

ಮಂಗಳೂರು : ನಮ್ಮಲ್ಲಿ ಕಸ ಎಸೆಯುವ ಮನಸ್ಥಿತಿಯನ್ನು ಬದಲಾಯಿಸಬೇಕಾದರೆ ಸಾರ್ವಜನಿಕವಾಗಿ ಕಸ ಹೆಕ್ಕುವ ಸಂಪ್ರದಾಯ ಸಾರ್ವತ್ರಿಕವಾಗಬೇಕು. ಪೋಷಕರು ತಮ್ಮ ಮಕ್ಕಳಲ್ಲಿ ಸಣ್ಣ ಪ್ರಾಯದಲ್ಲೇ ಸ್ವಚ್ಛತೆಯ ಅರಿವನ್ನು ಮೂಡಿಸಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಾಗೃತ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವೇಕ್ ಕುಡ್ಲಾದ ಸಂಚಾಲಕರಾದ ಉಮಾನಾಥ್ ಕೋಟೆಕಾರ್ ಅವರು ಹೇಳಿದರು.

ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್ ಮಂಗಳೂರು ಶಾಖೆಯ ಆಶ್ರಯದಲ್ಲಿ “ಸ್ವಚ್ಛತೆಯೇ ಸೇವೆ” ದ್ಯೇಯದೊಂದಿಗೆ ಆಯೋಜಿಸಲಾದ 16ನೇ ಸ್ವಚ್ಛ ಭಾರತ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಪತ್ರಕರ್ತ ಗುರುಪ್ರಸಾದ್ ಎಸ್. ಅವರು ಮಾತನಾಡಿ, ನಾಗರಿಕ ಸಮಾಜದಲ್ಲಿ ಸ್ವಚ್ಛತೆಯ ಪರಿಪಾಠವು ಮನೆ ಹಾಗೂ ಮನದಾಳದಿಂದಲೇ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಪ್ರತೀ ಮನೆಯ ಜೊತೆಗೆ ಸಂಘ–ಸಂಸ್ಥೆಗಳಿಗೂ ಮಹತ್ವದ ಜವಾಬ್ದಾರಿ ಇದೆ. ಈ ದಿಶೆಯಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಒಂದು ಉತ್ತಮ ಮಾದರಿ ಎಂದು ಅಭಿಪ್ರಾಯಪಟ್ಟರು.

ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ, ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡ್‌ನ ನಿಕಟಪೂರ್ವ ಸದಸ್ಯ ಕೇಶವ ಮಾರೋಳಿ, ಯಮುನಾ ರೆಸಿಡೆನ್ಸಿ ಕಟ್ಟಡ ಮಾಲೀಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಹಾಗೂ ಎಸ್.ಸಿ. ವರ್ಮ ಅವರುಗಳು ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.

ನಂತರ ಮರೋಳಿಯ ಬಾಕಿಮಾರು ಜಂಕ್ಷನ್, ಯಮುನಾ ರೆಸಿಡೆನ್ಸಿ, ಸೂರ್ಯನಾರಾಯಣ ದೇವಸ್ಥಾನ ರಸ್ತೆ ಹಾಗೂ ಜಯನಗರ ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕ ಹರಿಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ, ದಕ್ಷಿಣ ಕನ್ನಡ ಚಿನ್ನದ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಳೇಜಿ, ಸಾಮಾಜಿಕ ಕಾರ್ಯಕರ್ತ ಅರುಣ್ ಶೆಟ್ಟಿ ಮರೋಳಿ, ಭಾಸ್ಕರ ದೇವಾಡಿಗ, ಯಮುನಾ ರೆಸಿಡೆನ್ಸಿ ಕಟ್ಟಡ ಮಾಲೀಕರ ಸಂಘದ ಪದಾಧಿಕಾರಿಗಳಾದ ರಾಧಾಕೃಷ್ಣ ರೈ, ಸಂಜೀವ ರೈ, ಪುರಂದರ ಶೆಟ್ಟಿ, ಡಾ. ಮಹೇಶ್ ಶೇಣವ, ಮಂಜುನಾಥ್ ಕುಲಕರ್ಣಿ, ಬಾಲಕೃಷ್ಣ ಶೆಟ್ಟಿ, ವಾಣಿ ರೈ, ಮಮತಾ ರೋಹಿತ್ ರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕರಸೇವಾ ಬಳಗ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ, ಹಿಂದೂ ಯುವ ಸೇನೆ ಸೂರ್ಯನಾರಾಯಣ ಶಾಖೆ, ಮರೋಳಿ ಯುವಕ ಮಂಡಳ (ರಿ.), ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಅಭಿಮನ್ಯು ಶಾಖೆ ಕಾರ್ಯಕರ್ತರು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿಗಳು ಸ್ವಯಂಸೇವಕರಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಯಶಸ್ಸು ತಂದರು.

LEAVE A REPLY

Please enter your comment!
Please enter your name here