ಓದುವ ಹವ್ಯಾಸದಿಂದ ಭಾಷಾ ಕೌಶಲ್ಯ ವೃದ್ಧಿ: ಡಾ. ಯಲ್ಲಮ್ಮ

0
10

ಉಡುಪಿ : ಪುಸ್ತಕಗಳನ್ನು ಓದುವುದರಿಂದ ನಾವು ಜ್ಞಾನ ಸಂಪಾದನೆ ಮಾಡಬಹುದು. ಓದುವಿಕೆ ನಮ್ಮ ಭಾಷಾ ಕೌಶಲ್ಯ ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ ಹೇಳಿದರು.
ಬುಧವಾರ ಅಜ್ಜರಕಾಡು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ನಿಮಿತ್ತ ನಡೆದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪುಸ್ತಕಗಳು ಮತ್ತು ಲೇಖನಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. ಮಹಾನ್​ ಕ್ರಾಂತಿಕಾರಿಗಳ ಲೇಖನಗಳನ್ನು ಓದಿ ಪ್ರಭಾವಿತರಾಗಿ ಅನೇಕ ಮಂದಿ ಸ್ವಾತಂತ್ರ ಹೋರಾಟದಲ್ಲಿ ಧುಮುಕಿದ್ದಾರೆ. ಪುಸ್ತಕಗಳು ಸಮಾಜ ಪರಿವರ್ತನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಸುರೇಖಾ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಎಸ್​.ಆರ್​. ರಂಗನಾಥ್​ ಜನ್ಮ ದಿನಾಚರಣೆಯನ್ನು ರಾಜ್ಯಾದ್ಯಂತ ಗ್ರಂಥಪಾಲಕರ ದಿನವಾಗಿ ಆಚರಿಸಲಾಗುತ್ತಿದೆ. ಆ.14 ರಂದು ಗ್ರಂಥಾಲಯದಲ್ಲಿ ನಮ್ಮ ಸಾಹಿತಿ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಜಿಲ್ಲಾ ಕೇಂದ್ರದ ಗ್ರಂಥ ಪಾಲಕಿ ವನಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಯನ ಅನುಭವ ಹಂಚಿಕೊಂಡರು. ನಗರ ಕೇಂದ್ರ ಗ್ರಂಥಾಲಯದ ಗ್ರಂಥ ಪಾಲಕಿ ರಂಜಿತ ವಂದಿಸಿದರು.