ವಿಶೇಷ ವಿದ್ಯಾರ್ಥಿಗಳಿಗೆ ಅಮೇರಿಕಾದಿಂದ ಹೊಸ ವರ್ಷದ ಗ್ರಿಟಿಂಗ್ಸ್ ಕಾರ್ಡ್ ಮೂಲಕ ಶುಭಾಶಯ

0
31

ಕಾರ್ಕಳ : ಅಮೇರಿಕಾದ ಕ್ಯಾಲಿಪೋರ್ನಿಯಾದ adobe ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು ಕಾರ್ಕಳದ ಚೇತನಾ ವಿಶೇಷ ಶಾಲೆಯ ವಿಶೇಷ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರಿಗೆ 2029 ನೇ ಇಸವಿಯ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುವ ಉದ್ದೇಶದಿಂದ ಸ್ವತಃ ಕೈಯಿಂದ ತಯಾರಿಸಿದ ಗ್ರಿಟಿಂಗ್ಸ್ ಕಾರ್ಡ್ಗಳನ್ನು ಕಳುಹಿಸಿಕೊಟ್ಟಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ adobe ಸಂಸ್ಥೆಯ ಸಿಬ್ಬಂದಿ ವರ್ಗದವರು ಈ ರೀತಿಯ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಸಂಸ್ಥೆಯ ವತಿಯಿಂದ ಚೇತನಾ ವಿಶೇಷ ಶಾಲೆಗೆ ಆರ್ಥಿಕ ಪ್ರೋತ್ಸಾಹಧನವನ್ನು ನೀಡುವ ಮೂಲಕ ಸಹಕಾರ ನೀಡಲಾಗುತ್ತಿದೆ.

ಈ ಸೇವಾ ಕಾರ್ಯದ ಪ್ರಮುಖ ಸಂಯೋಜಕರಾಗಿ ಕ್ಯಾಲಿಪೋರ್ನಿಯಾದ adobe ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಫಾಲಿ ಶೆಟ್ಟಿಯವರು, ತಮ್ಮೊಂದಿಗೆ ಕೆಲಸ ಮಾಡುತ್ತಿರುವ ಸುಮಾರು 70 ಮಂದಿ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಈ ಗ್ರಿಟಿಂಗ್ಸ್ ಕಾರ್ಡ್ಗಳನ್ನು ತಯಾರಿಸಿ ಕಳುಹಿಸುವ ತಂಡವನ್ನು ಮುನ್ನಡೆಸಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಶಿಫಾಲಿ ಶೆಟ್ಟಿಯವರ ಹೆತ್ತವರಾದ ಸತೀಶ್ ಶೆಟ್ಟಿ ಹಾಗೂ ಶಶಿಕಲಾ ಶೆಟ್ಟಿಯವರು ಚೇತನಾ ವಿಶೇಷ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸಿಹಿತಿಂಡಿ ತಿನಿಸುಗಳನ್ನು ವಿತರಿಸುವ ಜೊತೆಗೆ ಅಮೇರಿಕಾದಿಂದ ಬಂದ ಶುಭಾಶಯ ಕಾರ್ಡ್ಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

ಈ ಮಾನವೀಯ ಹಾಗೂ ಸೇವಾಭಾವನೆಯ ಕಾರ್ಯಕ್ಕೆ ಸಹಕರಿಸಿದ ಶಿಫಾಲಿ ಶೆಟ್ಟಿ, ಅವರ ಕುಟುಂಬದವರು, adobe ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಆರ್ಥಿಕವಾಗಿ ಬೆಂಬಲ ನೀಡುತ್ತಿರುವ adobe ಸಂಸ್ಥೆಗೆ ಚೇತನಾ ವಿಶೇಷ ಶಾಲೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here