ನ್ಯೂಯಾರ್ಕ್: ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನ್ಯೂಯಾರ್ಕ್ ನಗರದಲ್ಲಿ 44ನೇ ವಾರ್ಷಿಕ ಇಂಡಿಯಾ ಡೇ ಪರೇಡ್ ಆಗಸ್ಟ್ 16, 2026ರಂದು ಭಾನುವಾರ ಅದ್ಧೂರಿಯಾಗಿ ನಡೆಯಲಿದೆ.
ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (FIA) ಆಯೋಜಿಸಿರುವ ಈ ಬೃಹತ್ ಕಾರ್ಯಕ್ರಮಕ್ಕೆ “Harmony in Heritage” (ಪರಂಪರೆಯಲ್ಲಿ ಸಾಮರಸ್ಯ) ಎಂಬ ಘೋಷವಾಕ್ಯವನ್ನು ನೀಡಲಾಗಿದೆ
ಈ ವರ್ಷದ ಇಂಡಿಯಾ ಡೇ ಪರೇಡ್‌ನ ಮುಖ್ಯ ಅತಿಥಿಯಾಗಿ ಖ್ಯಾತ ನ್ಯಾಯವಾದಿ , ಬಂಟ್ಸ್ ಫಾರಂ ಮುಂಬೈ ಅಧ್ಯಕ್ಷ ನ್ಯಾಯವಾದಿ ಮಂಜುನಾಥ್ ಹೆಗ್ಡೆ ಅವರು ಪುತ್ರಿ
ಖ್ಯಾತ ನಟಿ ಪೂಜಾ ಹೆಗ್ಡೆ ಭಾಗವಹಿಸಲಿದ್ದಾರೆ. ಭಾರತೀಯ ಚಿತ್ರರಂಗದ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ ಅವರ ಉಪಸ್ಥಿತಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.
.
ಮ್ಯಾನ್‌ಹ್ಯಾಟನ್‌ನ ಮ್ಯಾಡಿಸನ್ ಅವೆನ್ಯೂನಲ್ಲಿ ಮಧ್ಯಾಹ್ನ 12 ಗಂಟೆಗೆ ಪರೇಡ್ ಆರಂಭವಾಗಲಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಸಂಸ್ಕೃತಿ, ಪರಂಪರೆ ಮತ್ತು ಭಾರತದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಕಲಾತಂಡಗಳು, ಆಕರ್ಷಕ ಅಲಂಕೃತ ಮೆರವಣಿಗೆ ವಾಹನಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಆಗಸ್ಟ್ 15ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಟೈಮ್ಸ್ ಸ್ಕ್ವೇರ್‌ನಲ್ಲಿ ಬ್ರಾಡ್‌ವೇಯ W. 44ನೇ ಮತ್ತು W. 45ನೇ ಸ್ಟ್ರೀಟ್‌ಗಳ ನಡುವೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್ 16ರಂದು ಮಧ್ಯಾಹ್ನ 12 ಗಂಟೆಗೆ ಮ್ಯಾಡಿಸನ್ ಅವೆನ್ಯೂನ E. 38ನೇ ಸ್ಟ್ರೀಟ್‌ನಿಂದ E. 27ನೇ ಸ್ಟ್ರೀಟ್‌ವರೆಗೆ ಮೆರವಣಿಗೆ ಸಾಗಲಿದೆ.
E. 26ನೇ ಸ್ಟ್ರೀಟ್‌ನಲ್ಲಿ, ಮ್ಯಾಡಿಸನ್ ಅವೆನ್ಯೂದಿಂದ ಪಾರ್ಕ್ ಅವೆನ್ಯೂವರೆಗೆ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ವಿವಿಧ ಭಾರತೀಯ ಆಹಾರ ಮಳಿಗೆಗಳು ಮತ್ತು ಉತ್ಸವ ನಡೆಯಲಿದೆ.
ಮ್ಯಾಡಿಸನ್ ಅವೆನ್ಯೂನ E. 26ನೇ ಮತ್ತು E. 25ನೇ ಸ್ಟ್ರೀಟ್‌ಗಳ ನಡುವಿನ ಪ್ರದೇಶದಲ್ಲಿ ಮಧ್ಯಾಹ್ನ 2ರಿಂದ ಸಂಜೆ 5:30ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪರೇಡ್‌ನಲ್ಲಿ ಪಾನಿಪುರಿ ಕಿಂಗ್ ಮತ್ತು ಕ್ವೀನ್ ಸ್ಪರ್ಧೆ, ಸಾಂಪ್ರದಾಯಿಕ ಡೋಲ್ ವಾದನ, ಗರ್ಬಾ ಹಾಗೂ ಭಾಂಗ್ರಾ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಫ್ಲೋಟ್‌ಗಳು ಮತ್ತು ಮೆರವಣಿಗೆ ತಂಡಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿವೆ.
ನ್ಯೂಯಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇಂಡಿಯಾ ಡೇ ಪರೇಡ್‌ಗೆ ಪ್ರವೇಶ ಉಚಿತವಾಗಿದೆ.

