ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬ ನೀಡುತ್ತಿದ್ದ ನಿರಂತರ ಮಾನಸಿಕ ಹಿಂಸೆ ತಾಳಲಾರದೆ, ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠನಗರದ ನಿವಾಸಿಯಾದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ದುರ್ದೈವಿಯನ್ನು ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ದಿವ್ಯಾ ಎಂದು ಗುರುತಿಸಲಾಗಿದೆ. ಈಕೆಯ ಸಾವಿಗೆ ದೇಬೂರು ಗ್ರಾಮದ ಆದಿತ್ಯ ಎಂಬ ಯುವಕನೇ ನೇರ ಕಾರಣ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ದಿವ್ಯಾಳ ಬೆನ್ನತ್ತಿದ್ದ ಆದಿತ್ಯ, ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಆದಿತ್ಯನ ವರ್ತನೆಯಿಂದ ಅತೀವ ಮುಜುಗರ ಅನುಭವಿಸುತ್ತಿದ್ದ ದಿವ್ಯಾ, ಈ ಕಿರುಕುಳದ ಬಗ್ಗೆ ತನ್ನ ತಂದೆ ಗುರುಮೂರ್ತಿ ಅವರಿಗೆ ತಿಳಿಸಿದ್ದರು. ಮಗಳ ಪರಿಸ್ಥಿತಿಯನ್ನು ಕಂಡು ಕಳವಳಗೊಂಡ ತಂದೆ, ಊರಿನ ಹಿರಿಯರ ಸಮ್ಮುಖದಲ್ಲಿ ಆದಿತ್ಯನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದರು. ತನ್ನ ಮಗಳಿಗೆ ತೊಂದರೆ ಕೊಡದಂತೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಆದಿತ್ಯ ತನ್ನ ಪೀಡನೆಯನ್ನು ಮುಂದುವರಿಸಿದ್ದ ಎನ್ನಲಾಗಿದೆ.
ಯುವಕನ ಅತಿರೇಕದ ವರ್ತನೆ ಹಾಗೂ ಮಾನಸಿಕ ಕಿರುಕುಳದಿಂದ ಅಸಹಾಯಕಳಾದ ದಿವ್ಯಾ, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೃತಪಟ್ಟಿದ್ದಾರೆ. ಮಗಳ ಅನಿರೀಕ್ಷಿತ ಸಾವು ಪೋಷಕರನ್ನು ಆಘಾತಕ್ಕೆ ದೂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತಳ ತಂದೆ ಗುರುಮೂರ್ತಿ ಅವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಆದಿತ್ಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

