
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ) ಉಳ್ಳಾಲ ಘಟಕದ ವತಿಯಿಂದ ಮಕ್ಕಳ ಸಾಹಿತ್ಯ ಸಂಭ್ರಮ ಹಾಗೂ ಮಕ್ಕಳ ಕವಿಗೋಷ್ಟಿ ಕಾರ್ಯಕ್ರಮವು ಉಳ್ಳಾಲದ ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
” ಮಕ್ಕಳಲ್ಲಿ ಸಾಹಿತ್ಯಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಕವಿಗೋಷ್ಟಿ ಹಾಗೂ ಇನ್ನಿತರ ಪ್ರಕಾರಗಳ ಕಾರ್ಯಕ್ರಮಗಳನ್ನು ಪಠ್ಯೇತರ ಭಾಗವಾಗಿ ಶಾಲೆಗಳಲ್ಲಿ ನಡೆಸಬೇಕು. ಮೊಬೈಲ್ ಗೀಳಿಗೆ ಬಲಿಯಾಗಿರುವ ಮಕ್ಕಳನ್ನು ಅದರಿಂದ ಹೊರತರಲು ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ. ” ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಬಾಬುಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಗನ್ನಾಡಿದರು. ” ಸಾಹಿತ್ಯ ಎಂಬುವುದು ನಾಡನ್ನು ಸುಭಿಕ್ಷಗೊಳಿಸುವ ಸಂಪತ್ತಾಗಿದೆ. ಸಾಹಿತ್ಯದಿಂದ ಮಕ್ಕಳಲ್ಲಿ ಹೊಸಚಿಂತನೆಗಳನ್ನು ಬೆಳೆಸಲು ಸಾಧ್ಯ. ಮಕ್ಕಳ ಕವಿಗೋಷ್ಟಿ ಕಾರ್ಯಕ್ರಮ ಮಕ್ಕಳಲ್ಲಿ ಸಾಹಿತ್ಯಪ್ರೇಮವನ್ನು ಬೆಳೆಸಲು ಸಹಕಾರಿ. ಇದಕ್ಕಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಉಳ್ಳಾಲದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ” ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಉಳ್ಳಾಲ ಘಟಕದ ಗೌರವಾಧ್ಯಕ್ಷರಾದ ಸುರೇಶ್ ಭಟ್ನಗರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಉಳ್ಳಾಲ ಮಕ್ಕಳ ಸಾಹಿತ್ಯ ಪರಿಷತ್ತಿನ ಸದಸ್ಯ ಫಯಾಝ್ ದೊಡ್ಡಮನೆ ಆಶಯ ನುಡಿಗನ್ನಾಡಿದರು. ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ, ಉಳ್ಳಾಲ ಮಕ್ಕಳ ಸಾಹಿತ್ಯ ಪರಿಷತ್ತಿನ ಸದಸ್ಯೆ ಜ್ಯೋತಿ ಸ್ವರಚಿತ ಕವನ ವಾಚಿಸಿದರು. ಉಳ್ಳಾಲ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಉಳ್ಳಾಲ ಮಕ್ಕಳ ಸಾಹಿತ್ಯ ಪರಿಷತ್ತಿನ ಸದಸ್ಯ ಹೃದಯ ಕವಿ ಮನ್ಸೂರ್ ಮುಲ್ಕಿಯವರು ಮಕ್ಕಳನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿ ಕವನ ವಾಚಿಸಿದರು.
ಉಳ್ಳಾಲದ ನೇತಾಜಿ ಸರಕಾರಿ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಹಾಗೂ ಉಳ್ಳಾಲದ ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ನೇತಾಜಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಿಹಾಲ್ ಎಸ್. ಪೂಜಾರಿ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದರು. ಉಳ್ಳಾಲ ಮಕ್ಕಳ ಸಾಹಿತ್ಯ ಪರಿಷತ್ತಿನ ಸದಸ್ಯೆ, ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸವೀತಾ ನಾಯಕ್ ಹಾಗೂ ಉಳ್ಳಾಲ ಮಕ್ಕಳ ಸಾಹಿತ್ಯ ಪರಿಷತ್ತಿನ ಸದಸ್ಯ ಸೈಫ್ ಕುತ್ತಾರ್ ಪ್ರತಿಕ್ರಿಯೆ ನೀಡಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ಪ್ರೇಮ ಮೂಗಪ್ಪ, ಆಶೀರುದ್ದೀನ್ ಸಾರ್ತಬೈಲ್ ಹಾಗೂ ಸಮಾಜಿಕ ಕಾರ್ಯಕರ್ತ ಇಸ್ಮತ್ ಪಜೀರ್, SDMC ಉಪಾಧ್ಯಕ್ಷರಾದ ರಫೀಕ್ ಸಭೆಯಲ್ಲಿ ಉಪಸ್ಥಿತರಿದ್ದರು. ಕವಿಗೋಷ್ಟಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಯಿತು. ಉಳ್ಳಾಲ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸಿಹಾನ ಬಿ.ಎಂ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯೆ ಶಶಿಕಲ ಗಟ್ಟಿ ಪ್ರಾರ್ಥನಾಗೀತೆ ಹಾಡಿದರು. ಸದಸ್ಯ ಮಂಗಳೂರು ರಿಯಾಝ್ ಕಾರ್ಯಕ್ರಮವನ್ನು ನಿರೂಪಿಸಿದರು. ಆಕಾಶ್ ಧನ್ಯವಾದ ಸಮರ್ಪಿಸಿದರು.
