ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯಶ್ರೀ ಅಜೀರು ಆಯ್ಕೆ ,ಉಮೇಶ್ ಮಿಜಾರ್ ಗೆ ಕಲಾಭೂಷಣ ಪ್ರಶಸ್ತಿ ಪ್ರದಾನ

0
40

ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷರಂಗದ ಅಗ್ರಮಾನ್ಯ ಮಹಿಳಾ ಭಾಗವತ ರಾದ ಕಾವ್ಯಶ್ರೀ ಅಜೇರು ಆಯ್ಕೆಯಾಗಿದ್ದಾರೆ. 

ಶ್ರೀಕುಂದೇಶ್ವರ ದೇಗುಲದ ಧರ್ಮದರ್ಶಿಯಾಗಿ, ಯಕ್ಷಗಾನ ಮೇಳ ಸಂಘಟಕ, ಕಲಾವಿದ, ಅರ್ಥಧಾರಿಯಾಗಿದ್ದ ದಿ.ರಾಘವೇಂದ್ರ ಭಟ್ ಸ್ಮರಣಾರ್ಥ, ಕ್ಷೇತ್ರದ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಜ.23ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯ್ಕೆ ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶ್ರೀ ಕುಂದೇಶ್ವರ ಕ್ಷೇತ್ರದಲ್ಲಿ ಜನವರಿ 21ರಿಂದ 23ರವರೆಗೆ ವರ್ಷಾವಧಿ ಜಾತ್ರೆ ನಡೆಯಲಿದ್ದು, ಜ.23ರಂದು ರಾತ್ರಿ7 ಗಂಟೆಯಿಂದ ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ ಕದ್ರಿ ಮಹಿಳಾ ಯಕ್ಷಕೂಟ ದವರಿಂದ ಮಹಿಳಾ ಯಕ್ಷಗಾನ, ನಮ್ಮ ಬೆದ್ರ ತಂಡದವರಿಂದ ತುಳು ನಾಟಕ ನಡೆಯಲಿದೆ.  ಇದೇ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು.  

ಈ ಹಿಂದೆ ಸಾಲಿಗ್ರಾಮ ಮೇಳದ ಸಂಚಾಲಕ ಕಿಶನ್ ಹೆಗ್ಡೆ, ರಮೇಶ್ ಭಂಡಾರಿ ಪಟ್ಲ ಸತೀಶ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ರಾಘವೇಂದ್ರ ಮಯ್ಯ, ಕಟೀಲು ಶ್ರೀಹರಿ ನಾರಾಯಣದಾಸ ಆಸ್ರಣ್ಣ, ಲೋಕೇಶ್ ಮಚ್ಚೂರು ಮೊದಲಾದವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕುಂದೇಶ್ವರ ಕಲಾಭೂಷಣ ಪ್ರಶಸ್ತಿ: ರಂಗಭೂಮಿ ಕಲಾವಿದರಿಗೆ ನೀಡಲಾಗುವ ಕುಂದೇಶ್ವರ ಕಲಾಭೂಣ ಭೂಷಣ ಪ್ರಶಸ್ತಿ ಈ ಬಾರಿ ಉಮೇಶ್ ಮಿಜಾರು ಅವರಿಗೆ ಪ್ರಧಾನ ಮಾಡಲಾಗುವುದು.  ಸಮಾರಂಭದ ಬಳಿಕ ನಮ್ಮ ಬೆದ್ರ ಕಲಾವಿದರಿಂದ ವೈರಲ್ ವೈಶಾಲಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಯಕ್ಷ ಕೋಗಿಲೆ:  ಕಾವ್ಯಶ್ರೀ ಅಜೇರು :

ಯಕ್ಷಗಾನ ರಂಗದಲ್ಲಿ ಅಪರೂಪದ ಗಾಯನ ಮಾಧುರ್ಯ ಮತ್ತು ಪ್ರೌಢಿಮೆಯೊಂದಿಗೆ ಗುರುತಿಸಿಕೊಂಡಿರುವ ಕಾವ್ಯಶ್ರೀ ಅಜೇರು ಅವರು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಅಗ್ರಮಾನ್ಯ ಮಹಿಳಾ ಭಾಗವತರಾಗಿ ಹೆಸರಾಗಿದ್ದಾರೆ. ಕೇವಲ 9ನೇ ವಯಸ್ಸಿನಲ್ಲಿ ಯಕ್ಷಗಾನ ಭಾಗವತಿಕೆ ಕಲಿಯಲು ಆರಂಭಿಸಿದ ಕಾವ್ಯಶ್ರೀ, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಂತಹ ದಿಗ್ಗಜ ಗುರುಗಳಿಂದ ಶಿಸ್ತುಬದ್ಧ ತರಬೇತಿ ಪಡೆದಿದ್ದಾರೆ.

21 ವರ್ಷಗಳಿಂದ ಯಕ್ಷಗಾನ ಭಾಗವತಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇವರು, ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲೂ ಸಮಾನ ಪ್ರೌಢಿಮೆ ಸಾಧಿಸಿದ್ದಾರೆ. ಉಭಯ ಶೈಲಿಗಳ ಪ್ರಸಿದ್ಧ ಭಾಗವತರೊಂದಿಗೆ ಜುಗಲ್ಬಂದಿ ನಡೆಸಿ ಕಲಾರಸಿಕರ ಮೆಚ್ಚುಗೆ ಗಳಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಯಕ್ಷಗಾನ ತಾಳಮದ್ದಳೆ ಸ್ಪರ್ಧೆಗಳಲ್ಲಿ ಸತತವಾಗಿ ಬಹುಮಾನಗಳನ್ನು ಪಡೆದು ತಮ್ಮ ಗಾಯನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಮಂಗಳೂರು ಆಕಾಶವಾಣಿಯ ‘ಬಿ’ ಗ್ರೇಡ್ ಕಲಾವಿದೆಯಾಗಿರುವ ಕಾವ್ಯಶ್ರೀ ಅವರು ದೂರದರ್ಶನ ಹಾಗೂ ಚಂದನ ವಾಹಿನಿಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕಟೀಲು ಮೇಳ, ಬಪ್ಪನಾಡು ಮೇಳ, ಹೊಸನಗರ ಮೇಳ ಸೇರಿದಂತೆ ಕರಾವಳಿಯ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಅತಿಥಿ ಕಲಾವಿದೆಯಾಗಿ ಭಾಗವಹಿಸಿ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ. ಮುಂಬೈ, ಪುಣೆ, ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಕಲಾಸೇವೆ ಸಲ್ಲಿಸಿ ಯಕ್ಷಗಾನದ ಘನತೆಯನ್ನು ಹೆಚ್ಚಿಸಿದ್ದಾರೆ.

1994ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಜೇರು ಗ್ರಾಮದಲ್ಲಿ ಶ್ರೀಪತಿ ನಾಯಕ್ ಹಾಗೂ ಉಮಾ ದಂಪತಿಗಳ ಪುತ್ರಿಯಾಗಿ ಜನಿಸಿದ ಕಾವ್ಯಶ್ರೀ ಅವರು ವಿದ್ಯಾಭ್ಯಾಸದಲ್ಲಿಯೂ ಅತ್ಯಂತ ಚುರುಕಾಗಿದ್ದಾರೆ. ಬಿ.ಇಡಿ ಹಾಗೂ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಶಾಸ್ತ್ರೀಯ ಸಂಗೀತದಲ್ಲಿಯೂ ಜೂನಿಯರ್ ಶ್ರೇಣಿಯನ್ನು ಪಡೆದಿದ್ದಾರೆ. ಕಲೆ ಮತ್ತು ಶಿಕ್ಷಣ ಎರಡನ್ನೂ ಸಮಾನವಾಗಿ ಸಾಧಿಸಿಕೊಂಡಿರುವ ಕಾವ್ಯಶ್ರೀ ಅಜೇರು ಅವರು ಇಂದಿನ ಯುವ ಕಲಾವಿದರಿಗೆ ಪ್ರೇರಣೆಯಾಗಿ ನಿಲ್ಲಿಸಿದ್ದಾರೆ.

ಕಲಾಭೂಷಣ ಉಮೇಶ್ ಮಿಜಾರ್ :  

ಮಂಗಳೂರು ಮಿಜಾರಿನ ಯಕ್ಷಗಾನ ಕಲಾವಿದ ದಂಪತಿಯ ಪುತ್ರ ಉಮೇಶ್ ಮಿಜಾರ್, ಕಷ್ಟದ ಪರಿಸ್ಥಿತಿಯಿಂದ ಪ್ರೇರಣೆಯಾಗಿ ಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಬಡತನದ ಕಾರಣ 9ನೇ ತರಗತಿಯಲ್ಲಿ ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸಿ ಉದ್ಯೋಗಕ್ಕಾಗಿ ಮುಂಬೈಗೆ ವಲಸೆ ಹೋದ ಉಮೇಶ್, ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಲೇ ರಂಗಭೂಮಿಯತ್ತ ಆಕರ್ಷಿತರಾಗಿ ಪ್ರಾರಂಭಿಸಿದರು.

ಮುಂಭೈನಲ್ಲಿ ಮಹಿಳಾ ಪಾತ್ರಗಳ ಮೂಲಕ ಮೊದಲ ಬಾರಿ ಕಲಾವಿಕ ಜಗತ್ತಿನಲ್ಲಿ ಪ್ರವೇಶ ಮಾಡಿದ ಅವರು ನಂತರ ನಾಟಕ ರಚನೆ ಹಾಗೂ ಹಾಸ್ಯ ನಟನೆಯಲ್ಲಿ ತೊಡಗಿಸಿಕೊಂಡು, 1996ರಲ್ಲಿ ‘ನಮ್ಮ ಕಲಾವಿದೆರ್ ಬೆಳ್ಳಿ’ ತಂಡವನ್ನು ಸ್ಥಾಪಿಸಿ ಯಶಸ್ವಿ ಸಂಘಟಕರಾದರು. ಅನೇಕ ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸುವ ಮೂಲಕ ಅವರ ಖ್ಯಾತಿ ಕೇವಲ ರಂಗಭೂಮಿಯಲ್ಲದೆ ಬೆಳ್ಳಿಪರೆದೆಗೂ ವಿಸ್ತಾರವಾಗಿದೆ.

35 ವರ್ಷಗಳ ಕಲಾಜೀವನದಲ್ಲಿ ಉಮೇಶ್ ಮಿಜಾರ್ 80ಕ್ಕೂ ಹೆಚ್ಚು ತುಳು ಚಿತ್ರಗಳಲ್ಲಿ, ಆರು ಕನ್ನಡ ಚಿತ್ರಗಳಲ್ಲಿ ಮತ್ತು ಆರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿಯಲ್ಲಿ ಅವರು ನಿರ್ವಹಿಸಿದ ನಾಟಕಗಳು ಮತ್ತು ಅಭಿನಯಗಳು ತುಳು ನಾಟಕ ಪ್ರೇಮಿಗಳಿಗೆ ಅಮೂಲ್ಯ ಕೊಡುಗೆಗಳಾಗಿ ಗುರುತಿಸಿಕೊಂಡಿವೆ. ಉಮೇಶ್ ಮಿಜಾರ್ ಅವರು ತಮ್ಮ ಕಲಾತ್ಮಕ ಪ್ರಯತ್ನಗಳ ಮೂಲಕ ಯುವ ಕಲಾವಿದರಿಗೆ ಪ್ರೇರಣೆ ನೀಡುವಂತಿದ್ದರು ಮತ್ತು ತುಳು ನಾಟಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುತ್ತಿದ್ದಾರೆ.

LEAVE A REPLY

Please enter your comment!
Please enter your name here