ಕಾರ್ಕಳ : ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಹಾನಿಗೀಡಾಗಿ , ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿರುವ ಘಟನೆ ಸಾಣೂರು ಗ್ರಾಮದ ಮುದ್ದಣ್ಣ ನಗರ ಎಂಬಲ್ಲಿ ತಡರಾತ್ರಿ 1:30ರ ಸುಮಾರಿಗೆ ಸಂಭವಿಸಿದೆ.
ಮುದ್ದಣ್ಣ ನಗರದ ವಾರಿಜಾ ಎಂಬುವವರ ಮನೆಯಲ್ಲಿ ಈ ಅವಘಡ ನಡೆದಿದೆ. ಅಡುಗೆ ಕೋಣೆಯ ಹೊರಭಾಗದ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು , ಸ್ಫೋಟದ ತೀವ್ರತೆಗೆ ಮನೆಯ ಗೋಡೆ, ಫರ್ನಿಚರ್, ವಾಷಿಂಗ್ ಮಷೀನ್, ಪಾತ್ರೆ ಪಗಡಿ ಹಾಗೂ ವಿದ್ಯುತ್ ಉಪಕರಣಗಳು ಸಂಪೂರ್ಣ ಹಾನಿಗೊಳಗಾಗಿವೆ. ಮನೆಯ ಹೊರಪಾರ್ಶ್ವದಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಸಿಲಿಂಡರ್ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

