ಕೆನರಾ ಅಸೋಸಿಯೇಷನ್(ರಿ),ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ಇದರ 16ನೇ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 17-01-2026 ರಂದು ಅಮೃತಾಯ ಫಂಕ್ಷನ್ ಹಾಲ್, ಅನಂತನಗರ ದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಖ್ಯಾತ ವಾಗ್ಮಿ, ಸಾಧಕ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
2025 -26 ನೇ ಸಾಲಿನ ಅಸೋಸಿಯೇಷನ್ ನ ಪ್ರತಿಷ್ಠಿತ “ಕೆನರಾ ರತ್ನ” ಪ್ರಶಸ್ತಿಯನ್ನು ತುಳು ಭಾಷೆ,ತುಳು ಸಂಸ್ಕೃತಿಗೆ ನೀಡಿದ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಯಾನಂದ ಕತ್ತಲ್ ಸಾರ್ ಇವರಿಗೆ ನೀಡಲಾಯಿತು.
ಸಭಾ ಕಾರ್ಯಕ್ರಮವು ಮೋಕ್ಷಪ್ರದ ಮತ್ತು ದೀಪಶ್ರೀ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ಯವರು ಸ್ವಾಗತಿಸಿದರು. ಅಧ್ಯಕ್ಷರಾದ ಸತೀಶ್ ಕುಮಾರ್ ರವರು ಅಸೋಸಿಯೇಷನ್ ಬೆಳೆದು ಬಂದ ರೀತಿ ,ಉದ್ದೇಶ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
ಮುಖ್ಯ ಅತಿಥಿ ದಯಾನಂದ ಕತ್ತಲ್ ಸಾರ್ ಅಸೋಸಿಯೇಷನ್ ನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತುಳು ನಾಡು, ತುಳು ಸಂಸ್ಕೃತಿ, ಪ್ರಾಚೀನ ತುಳು ಲಿಪಿ, ತುಳುವರ ಆಹಾರ ಪದ್ದತಿಗಳ ಮಹತ್ವದ ಬಗ್ಗೆ ವಿವರಿಸಿದರು. ಕೆನರಾ ರತ್ನ ಪ್ರಶಸ್ತಿ ವಿಜೇತ ಶ್ರೀ ದಯಾನಂದ ಕತ್ತಲ್ ಸಾರ್ ರವರು ತುಳುನಾಡ ದೈವರಾದನೆ, ನಾಗಾರಾಧನೆ, ತಿರುಪತಿ ತಿಮ್ಮಪ್ಪನ ನಂಟಿನ ವಿವರಿಸಿ, ತುಳುನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರದ ಬಗ್ಗೆ ತುಂಬಿದ ಸಭೆಗೆ ವಿವರವಾಗಿ ಹೇಳಿದರು.

ಕೆನರಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆ ಸೋಸಿಯೇಷನ್ ನ ಉಪಾಧ್ಯಕ್ಷರಾದ ವಿಜಯ್ ಕುಲಾಲ್ ಎಂ. ನೆರವೇರಿಸಿದರು. ತುಳು ಭಾಷಣ ಸ್ಪರ್ಧೆ, ಕೃಷ್ಣ ರಾಧೆ ವೇಷ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕು| ಆರಾಧ್ಯ ದೇರಾಜೆ , ರಾಷ್ಟ್ರಮಟ್ಟದ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಬಹುಮುಖ ಪ್ರತಿಭೆ ಕು| ಶನಯ ಶರತ್ ಹಾಗೂ ಎಸ್ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಕು| ತ್ವಿಷಾ ಪಿ. ಆರ್., ಮನ್ವಿತ್ ಆರ್. ಮತ್ತು ತನಿಷ್ ರೈ ಏನ್. ಇವರುಗಳನ್ನು ಸನ್ಮಾನಿಸಲಾಯಿತು.
ಈ ಸನ್ಮಾನ ಕಾರ್ಯಕ್ರಮವನ್ನು ವಿನಯ ಕಟ್ಟೆ ನೆರವೇರಿಸಿದರು. ಸ್ಮಿತಾ ಸುನಿಲ್ ಶೆಟ್ಟಿ ವಂದನಾರ್ಪಣೆಗೈದರು. ವೇದಿಕೆಯಲ್ಲಿ ಉಪಾಧ್ಯಕ್ಷ ನವೀನ್ ಶೆಟ್ಟಿ, ಕೋಶಾಧಿಕಾರಿ ಶ್ರೀ ಯಶವಂತ್ , ಸಂಘಟನಾ ಕಾರ್ಯದರ್ಶಿ ಯೋಗೇಶ್ ದೇರಾಜೆ, ಜತೆ ಕಾರ್ಯದರ್ಶಿ ಶ್ವೇತಾ ಆರ್ ಹೆಗ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ವಸಂತ್ ಪೂಜಾರಿ, ವಿಠ್ಠಲ್ ಗೊಲ್ಲ , ಸಚಿನ್ ರೈ, ಸುಭಾಷ್ ಇವರುಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಅಸೋಸಿಯೇಷನ್ ನ ಸದಸ್ಯರಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಿತು. ಶ್ವೇತಾ ಹೆಗ್ಡೆ ಮತ್ತು ರೂಪ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

