ಕೊಂಬಾರು : ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆ , ಬೈಕ್‌ ಸವಾರ ಪಾರು

0
85

ಕಡಬ : ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ವಲಯದ ವ್ಯಾಪ್ತಿಗೆ ಒಳಪಟ್ಟ ಕೊಂಬಾರು ಗ್ರಾಮದ ಕಾಯರ್ತ-ಮಣಿಭಾಂಡ ರಸ್ತೆಯಲ್ಲಿ ಬೈಕ್ ಸವಾರ ಸ್ಥಳೀಯ ಆಗರಿ ನಿವಾಸಿ ವಿನಯ್ ಎಂಬವರಿಗೆ ರಸ್ತೆಯ ಮಧ್ಯೆ ಕಾಡಾನೆ ಎದುರಾದ ಘಟನೆ ಸಂಭವಿಸಿದೆ.

ಗಾಬರಿಗೊಂಡ ವಿನಯ್ ಅವರು ಬೈಕನ್ನು ಬಿಟ್ಟು ಓಡಿ ಪಾರಾಗಿದ್ದಾರೆ. ಆ ವೇಳೆ ಆನೆ ಬೈಕನ್ನು ತುಳಿದು ಹಾನಿಗೊಳಿಸಿದೆ. ಸುದ್ದಿ ತಿಳಿದ ಅರಣ್ಯ ಇಲಾಖೆಯ ಸಿಬಂದಿ ರಾತ್ರಿ ವೇಳೆಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬೈಕ್ ಸವಾರ ವಿನಯ್ ಅವರು ಒಂಟಿ ಆನೆಯನ್ನು ಕಂಡಿದ್ದಾಗಿ ಮಾಹಿತಿ ನೀಡಿದ್ದಾರೆ.

ಬೈಕ್ ಹಾನಿಗೊಂಡ ಹಿನ್ನೆಲೆಯಲ್ಲಿ ಪರಿಹಾರ ಧನ ನೀಡುವ ಸಲುವಾಗಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ. 20 ಸಾವಿರ ರೂ. ಪರಿಹಾರ ನೀಡಲು ಅವಕಾಶವಿದೆ. ಆನೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾಡುದಾರಿಯಲ್ಲಿ ರಾತ್ರಿ ವೇಳೆ ಅನಗತ್ಯವಾಗಿ ಸಂಚರಿಸುವುದನ್ನು ಕೈಬಿಟ್ಟು ಜಾಗರೂಕರಾಗಿರಬೇಕು. ನಮ್ಮ ಸಿಬಂದಿಗಳು ಆನೆಯ ಚಲನವಲನದ ಬಗ್ಗೆ ಅವಲೋಕಿಸಲು ಪರಿಸರದಲ್ಲಿ ರಾತ್ರಿ, ಹಗಲು ಗಸ್ತು ತಿರುಗುತ್ತಿದ್ದಾರೆ ಎಂದು ವಿಮಲ್ ಬಾಬು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here