ಪುತ್ತೂರು : ರಥಸಪ್ತಮಿಯ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇವರ ಸಹಯೋಗದಲ್ಲಿ “ಸಾಮೂಹಿಕ 108 ಸೂರ್ಯ ನಮಸ್ಕಾರ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು 2026ರ ಜನವರಿ 25ರಂದು ಭಾನುವಾರ ಬೆಳಿಗ್ಗೆ 5.00 ಗಂಟೆಯಿಂದ 7.00 ಗಂಟೆಯವರೆಗೆ ಪುತ್ತೂರಿನ ನೆಹರುನಗರದಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮುಂಭಾಗದಲ್ಲಿ ನಡೆಯಲಿದೆ.

ಸಂಸ್ಕಾರ–ಸಂಘಟನೆ–ಸೇವೆ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು “ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಮೂಲ ಚಿಂತನೆಯ ಆಧಾರದಲ್ಲಿ ಯೋಗ ಶಿಕ್ಷಣವನ್ನು ಸಮಾಜಮುಖಿಯಾಗಿ ವಿಸ್ತರಿಸುತ್ತಾ ಬಂದಿದೆ. ಶಿಸ್ತು, ಸಮಯಪಾಲನೆ, ಧನಾತ್ಮಕ ಚಿಂತನೆ, ಕ್ರಿಯಾಶೀಲ ಜೀವನ ಹಾಗೂ ಸಂಸ್ಕಾರಯುತ ಆದರ್ಶ ಕುಟುಂಬಗಳ ನಿರ್ಮಾಣ ಎಂಬ ಉನ್ನತ ಆಶಯಗಳೊಂದಿಗೆ ಸಾವಿರಾರು ನಿಸ್ವಾರ್ಥ ಯೋಗಬಂಧುಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಆರೋಗ್ಯಯುತ ಹಾಗೂ ಸಂಸ್ಕಾರಯುತ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ವಿವೇಕಾನಂದ ವಿದ್ಯಾವರ್ಧಕ ಸಂಘವು ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಭಾರತೀಯ ಪರಂಪರೆಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜೊತೆಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ.
ಸೂರ್ಯಾರಾಧನೆಯ ವೈಜ್ಞಾನಿಕ ಮಹತ್ವವನ್ನು ಜನಸಾಮಾನ್ಯರಿಗೆ ಪರಿಚಯಿಸುವುದು, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ಯೋಗದ ಮಹತ್ವವನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ನೂರಾರು ಯೋಗಬಂಧುಗಳು ಒಂದೇ ವೇದಿಕೆಯಲ್ಲಿ 108 ಸೂರ್ಯ ನಮಸ್ಕಾರಗಳನ್ನು ನೆರವೇರಿಸುವ ಮೂಲಕ ಆರೋಗ್ಯ, ಶಿಸ್ತು ಮತ್ತು ಸಂಸ್ಕಾರದ ಸಂದೇಶವನ್ನು ಸಾರಲಿದ್ದಾರೆ.
ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಯೋಗಬಂಧುಗಳು, ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 700 ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

