ಉಡುಪಿ : ಟೆಲಿಪೋನ್ ರೆಗ್ಯುಲೇಟರಿ ಅಥಾರಿಟಿ ಆಪ್ ಇಂಡಿಯಾ, ಕೊಲಾಬಾ ಪೊಲೀಸರು, ಇಡಿ ನಿರ್ದೇಶಕ ಹೀಗೆ ನಾನಾ ಹೆಸರಿನಲ್ಲಿ ಬೆದರಿಸಿದ ವಂಚಕರು ದಂಪತಿ ಖಾತೆಯಿಂದ 40 ಲಕ್ಷ ರೂ. ವರ್ಗಾಯಿಸಿಕೊಂಡು ಹೋಗಿರುವ ಬಗ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟಪಾಡಿ ಮೂಡಬೆಟ್ಟು ನಿವಾಸಿ ಕೆ. ರಾಘವೇಂದ್ರ ರಾವ್ ವಂಚನೆಗೊಳಗಾದವರು. ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಯಿಂದ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಬೆದರಿಕೆ ಕರೆಗಳನ್ನು ಮಾಡುತ್ತಿರುವುದಾಗಿ ಮುಂಬೈ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೀವು ಕೂಡಲೇ ಕೊಲಾಬಾ ಪೊಲೀಸ್ ಠಾಣೆ ಸಂಪರ್ಕಿಸಿ ಎನ್ಒಸಿ ಪಡೆಯಬೇಕು ಇಲ್ಲದಿದ್ದರೆ ಮೊಬೈಲ್ ಸಂಖ್ಯೆ 2 ಗಂಟೆಯ ಒಳಗೆ ನಿಷ್ಕ್ರಿಯಗೊಳಿಸಲಾಗುವುದು ಎಂದು ಹೇಳಿ ಕೊಲಾಬಾ ಪೊಲೀಸ್ ಠಾಣೆಗೆ ಕರೆ ವರ್ಗಾಯಿಸಿದ್ದರು.
ಆಡಿಯೋ ಕರೆಯನ್ನು ವೀಡಿಯೋ ಕರೆಗೆ ಬದಲಾಯಿಸಿ ತನಿಖಾಧಿಕಾರಿ ಎಂದು ಹೇಳಿಕೊಂಡು ತನಿಖೆಗೆ ಸಹಕರಿಸದಿದ್ದಲ್ಲಿ ಕೂಡಲೇ ಬಂಧಿಸಬೇಕಾಗುತ್ತದೆ ಎಂದು ಹೇಳಿದ್ದಾನೆ. ನಂತರ ಪ್ರತಿದಿನ ಕರೆ ಮಾಡಿ ವಿಚಾರಣೆ ಎಂದು ವಿವಿಧ ದಾಖಲೆಗಳನ್ನು ಪಡೆದುಕೊಂಡು ಪ್ರಕರಣವನ್ನು ಇಡಿ ವರ್ಗಾಯಿಸುತ್ತೇವೆ ಎಂಬುದಾಗಿ ಕಥೆ ಕಟ್ಟಿದ್ದಾರೆ.
ಮತ್ತೊಬ್ಬ ವ್ಯಕ್ತಿ ಪ್ರತ್ಯಕ್ಷನಾಗಿ ಬ್ಯಾಂಕ್ ಖಾತೆ ಹಾಗೂ ಆಸ್ತಿಯ ಮಾಹಿತಿಯನ್ನು ಪಡೆದು ಇವರ ಹೆಂಡತಿಯ ಖಾತೆಯಿಂದ 4 ಲಕ್ಷ ರೂ. ಹಣಕಾಸು ಇಲಾಖೆಯ ಗುಪ್ತ ಖಾತೆಗೆ ವರ್ಗಾಯಿಸುವಂತೆ ತಿಳಿಸಿದ್ದಾನೆ. ಹೀಗೆ ನಾನಾ ರೀತಿಯಲ್ಲಿ ಬೆದರಿಸಿ ಹೆಂಡತಿಯ ಖಾತೆಯಿಂದ ಮತ್ತೆ 21 ಲಕ್ಷ ರೂ.- ಹಾಗೂ ಇವರ ಖಾತೆಯಿಂದ 15 ಲಕ್ಷ ರೂ.- ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಒಟ್ಟು 40 ಲಕ್ಷ ರೂ. ಎಗರಿಸಿದ್ದಾರೆ.

