ಮನುಷ್ಯನಿಗೆ ಎರಡು ಬಗೆಯ ಹಲ್ಲುಗಳಿವೆ. ಒಂದು ಹಾಲು ಹಲ್ಲು ಮತ್ತೊಂದು ಶಾಶ್ವತ ಹಲ್ಲು. ಶಾಶ್ವತ ಹಲ್ಲು ಹಾಳಾಗಿ ಬಿದ್ದು ಹೋದಲ್ಲಿ ಅಥವಾ ತೆಗೆಸಿದಲ್ಲಿ ಕೃತಕ ಹಲ್ಲುಗಳಿಗೆ ಜನರು ಮೊರೆಹೋಗುತ್ತಾರೆ. ಮಾನವ ನಿರ್ಮಿತ ದಂತ ವೈದ್ಯರ ಹೊಸ ಆವಿಷ್ಕಾರವೇ ‘ದಂತ ಇಂಪ್ಲಾಂಟ್’. ಇದು ಇಪ್ಪತ್ತನೇ ಶತಮಾನದ ಹೊಸ ಆವಿಷ್ಕಾರ ಇದರಿಂದ ದಂತ ವೈದ್ಯಕೀಯ ವಿಜ್ಞಾನದಲ್ಲಿ ಹೊಸ ಶಕೆ ಆರಂಭಗೊಂಡಿದೆ. ಈ ರೀತಿಯ ಚಿಕಿತ್ಸೆಯಲ್ಲಿ ರೋಗಿಯ ದವಡೆಯ ಒಳಗೆ ಕೃತಕ ಬೇರುಗಳನ್ನು ಸ್ಥಾಪಿಸಲಾಗುತ್ತದೆ.
ಇದಕ್ಕಾಗಿ ‘ಟೈಟಾನಿಯಂ’ ಲೋಹವನ್ನು ಜೋಡಿಸಲಾಗುತ್ತದೆ. ಒಂದು ಹಲ್ಲು ಅಥವಾ ಸಂಪೂರ್ಣ ಮೇಲಿನ ಮತ್ತು ಕೆಳಗಿನ ದವಡೆಯ ಹಲ್ಲುಗಳನ್ನು ಈ ತಂತ್ರಜ್ಞಾನದಿಂದ ಪುನರ್ ಸ್ಥಾಪಿಸಲಾಗುತ್ತದೆ. ಯಾವುದೇ ಅಫಪಾತ, ದಂತಕ್ಷಯ, ವಸಡಿನ ರೋಗ ಅಥವಾ ಇನ್ನಾವುದೇ ಕಾಯಿಲೆಗಳಿಂದ ಹಲ್ಲು ಕಳೆದು ಹೋಗಿದ್ದಲ್ಲಿ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯ ಮುಖಾಂತರ ಕಳೆದುಕೊಂಡ ಹಲ್ಲಿನ ಸೌಂದರ್ಯವನ್ನು ಮತ್ತು ಕಾರ್ಯಕ್ಷಮತೆಯನ್ನು ಪುನಃ ಪಡೆಯಲಾಗುತ್ತದೆ.
ಹಿಂದಿನ ಕಾಲದಲ್ಲಿ ಹಲ್ಲು ಬಿದ್ದು ಹೋದಲ್ಲಿ ಕೃತಕ ದಂತ ಪಂಕ್ತಿಗಳಿಗೆ ಜನರು ಮಾರು ಹೋಗುತ್ತಿದ್ದರೆ ಈ ಕೃತಕ ಹಲ್ಲುಗಳು ಕೆಲವೊಮ್ಮೆ ಸಡಿಲವಾಗಬಹುದು ಮತ್ತು ಈ ಹಲ್ಲುಗಳಿಂದ ಆಹಾರವನ್ನು ಸರಿಯಾಗಿ ಜಗಿಯಲು ಕಷ್ಟವಾಗಬಹುದು ಅಥವಾ ಮಾತನಾಡುವಾಗ ಜಾರಿ ಬೀಳಬಹುದು ಅಥವಾ ಮಾತನಾಡುವಾಗ ತೊದಲುವಿಕೆ ಮತ್ತು ಸ್ವಚ್ಛ ಉಚ್ಚಾರಣೆ ಕಷ್ಟವಾಗಬಹುದು. ಇವೆಲ್ಲವೂ ಒಟ್ಟಾಗಿ ದೇಹದ ಆರೋಗ್ಯದ ಮೇಲೆ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಅಹಿತಕರವಾದ ಪರಿಣಾಮ ಬೀರಿ ಹಿಂಜರಿಕೆ, ಮಾನಸಿಕ ಒತ್ತಡಗಳಿಗೆ ಕಾರಣವಾಗಬಹುದು. ಈ ಎಲ್ಲಾ ತೊಂದರೆಗಳಿಗೆ ಶಾಶ್ವತ ಪರಿಹಾರ ಎಂಬಂತೆ ‘ದಂತ ಇಂಪ್ಲಾಂಟ್’ ವರವಾಗಿ ಪರಿಣಮಿಸಿದೆ.
ಅನುಕೂಲಗಳು–
*ಇಂಪ್ಲಾಂಟ್‍ಗಳು ಅಕ್ಕಪಕ್ಕದ ಹಲ್ಲುಗಳನ್ನು ಅವಲಂಭಿಸದೇ ತಮ್ಮ ಸ್ವಂತ ಲೋಹದ ಬೇರಿನ ಸಹಾಯದಿಂದ ಕೃತಕ ಹಲ್ಲಿಗೆ ಆಧಾರ ನೀಡುತ್ತದೆ. ಅಕ್ಕಪಕ್ಕದ ಹಲ್ಲಿಗೆ ಯಾವುದೇ ಸಂಚಕಾರವಿರುವುದಿಲ್ಲ.
*ಒಂದಕ್ಕಿಂತ ಹೆಚ್ಚು ಹಲ್ಲುಗಳ ಪಂಕ್ತಿಗೂ ಇವು ಆಧಾರ ನೀಡಬಲ್ಲವು. ಆದ ಕಾರಣ ತೆಗೆದು ಇಡುವ ಕೃತಕ ಆಂಶಿಕ ಹಲ್ಲಿನ ಅವಶ್ಯಕತೆಯೂ ಇರುವುದಿಲ್ಲ.
*ಸಂಪೂರ್ಣವಾಗಿ ಮೇಲೆ ಮತ್ತು ಕೆಳಗಿನ ದವಡೆಯ ಎಲ್ಲಾ ಹಲ್ಲುಗಳನ್ನು ಇಂಪ್ಲಾಂಟ್ ಹಲ್ಲಿನ ಮುಖಾಂತರ ಪುನರ್ ಸ್ಥಾಪಿಸಬಹುದು. ರೋಗಿಗಳಿಗೆ ಹಲ್ಲು ಜಾರಿಹೋಗತ್ತದೆ ಎಂಬ ಭಯವಿರುವುದಿಲ್ಲ. ಮಾನಸಿಕ ನೆಮ್ಮದಿ ಮತ್ತು ಆತ್ಮವಿಶ್ವಾಸ ಇದರಿಂದ ಹೆಚ್ಚಾಗುತ್ತದೆ.
ಚಿಕಿತ್ಸೆಯ ಹಂತಗಳು
1. ಪ್ರಾಥಮಿಕ ತಪಾಸಣೆ ಮತ್ತು ಚಿಕಿತ್ಸೆಯ ಪರಿಕಲ್ಪನೆ
ಈ ಹಂತದಲ್ಲಿ ರೋಗಿಯ ಕಳೆದುಹೋದ ಹಲ್ಲಿನ ಪರೀಕ್ಷೆ ನಡೆಸಿ ಮೂಳೆಯ ಎತ್ತರ, ಅಗಲಗಳನ್ನು ಮತ್ತು ಬಾಯಿಯ ಇತರ ಹಲ್ಲುಗಳ ಸ್ಥಿತಿಗತಿಗಳನ್ನು ಕೂಲಂಕುಶವಾಗಿ ಪರೀಕ್ಷಿಸಲಾಗುತ್ತದೆ. ಬಾಯಿಯ ಅಚ್ಚು ಮತ್ತು ದಂತ ಕ್ಷಕಿರಣದ ಮೂಲಕ ಪ್ರಾಥಮಿಕ ತಪಾಸಣೆ ನಡೆಸಲಾಗುತ್ತದೆ.
2. ಶಸ್ತ್ರ ಚಿಕಿತ್ಸೆ ಮತ್ತು ಇಂಪ್ಲಾಂಟ್ ಅಳವಡಿಕೆ
ಈ ಹಂತದಲ್ಲಿ ಅರಿವಳಿಕೆ ನೀಡಿ, ದವಡೆಯ ಒಳಗೆ ತೂತು ಮಾಡಿ ವಿಶಿಷ್ಟವಾದ ಲೋಹದ ಬೇರನ್ನು ದವಡೆಗೆ ಜೋಡಿಸಲಾಗುತ್ತದೆ. ಸಾಮಾನ್ಯವಾಗಿ ಈ ಲೋಹದ ಬೇರನ್ನು ಟೈಟಾನಿಯನ್ ಲೋಹದಿಂದ ಮಾಡಿರುತ್ತಾರೆ. ಈ ಲೋಹದ ಬೇರಿಗೆ ಮುಚ್ಚಳ ಹಾಕಲಾಗುತ್ತದೆ. ಮುಂದುಗಡೆ ಹಲ್ಲಿನ ಜೋಡಣೆಯಾಗಿದ್ದಲ್ಲಿ, ತಕ್ಷಣವೇ ಈ ಲೋಹದ ಬೇರಿಗೆ ಕೃತಕ ಹಲ್ಲನ್ನು ಜೋಡಿಸಲಾಗುತ್ತದೆ. ಜಗಿಯುವ ಹಿಂದಿನ ದವಡೆ ಹಲ್ಲಿನ ಇಂಪ್ಲಾಂಟ್ ಆಗಿದ್ದಲ್ಲಿ ಕೂಡಲೇ ಕೃತಕ ಹಲ್ಲನ್ನು ಜೋಡಿಸುವುದಿಲ್ಲ.
3. ಕಾಯುವ ಹಂತ
ಈ ಹಂತದಲ್ಲಿ ಹೆಚ್ಚಾಗಿ ದವಡೆ ಹಲ್ಲುಗಳ ‘ಇಂಪ್ಲಾಂಟ್’ ಆಗಿದ್ದರೆ, 3 ರಿಂದ 6 ತಿಂಗಳಕಾಲ ಲೋಹದ ಬೇರು ಮೂಳೆಗಳ ಜೊತೆಗೆ ಬೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಹಂತದಲ್ಲಿ 3 ರಿಂದ 6 ತಿಂಗಳು ಹಲ್ಲಿಲ್ಲದೆ ಕಾಯಬೇಕಾಗುತ್ತದೆ.
4. ಎರಡನೇ ಹಂತದ ಶಸ್ತ್ರಚಿಕಿತ್ಸೆ
ಈ ಹಂತದಲ್ಲಿ ಲೋಹದ ಬೇರು ದವಡೆಗೆ ಹಾಕಿದ 6 ತಿಂಗಳ ಬಳಿಕ, ಲೋಹದ ಬೇರಿನ ಮೇಲ್ಪದರದ ಮೇಲೆ ಬೆಳೆದ ವಸಡನ್ನು ಕತ್ತರಿಸಿ ತೆಗೆಯಲಾಗುತ್ತದೆ ಮತ್ತು ಲೋಹದ ಬೇರಿಗೆ ‘ಅಬಟ್‍ಮೆಂಟ್’ ಅಥವಾ ಲೋಹ ವಿಸ್ತಾರಕ ಎಂಬ ಸಾಧನವನ್ನು ಜೋಡಿಸಲಾಗುತ್ತದೆ. ಈ ಲೋಹ ವಿಸ್ತಾರಕದ ಅಚ್ಚು ತೆಗೆದು, ಅದಕ್ಕೆ ಪೂರಕವಾದ ಕೃತಕ ಹಲ್ಲನ್ನು ನಿರ್ಮಿಸಿ ವಿಸ್ತಾರಕಕ್ಕೆ ಹಲ್ಲನ್ನು ಜೋಡಿಸಲಾಗುತ್ತದೆ.
ಒಟ್ಟಿನಲ್ಲಿ ‘ಇಂಪ್ಲಾಂಟ್ ಹಲ್ಲು’ ದಂತ ವೈಧ್ಯ ವಿಜ್ಞಾನದ ಹೊಸ ಆವಿಷ್ಕಾರವಾಗಿದ್ದು, ರೋಗಿಗಳಿಗೆ ವರವಾಗಿ ಪರಿಣಮಿಸಿದೆ.
-ಡಾ ಮುರಲಿ ಮೋಹನ್ ಚೂಂತಾರು

