ನಿನ್ನಿಕಲ್ಲು ಪಾದೆಯನ್ನುಜಾಗತಿಕ ಪಾರಂಪರಿಕ ಪ್ರಾಕೃತಿಕ ತಾಣವಾಗಿ ಅಭಿವೃದ್ಧಿಗೆ ಸಂಕಲ್ಪ

0
105

ಜನಜಾಗೃತಿ ಸಭೆಯಲ್ಲಿ ಮಹತ್ವದ ನಿರ್ಧಾರ

ಪಡುಬಿದ್ರಿ : ತುಳುನಾಡಿನ ಅಪೂರ್ವ ಪುರಾತನ ಪರಂಪರೆಯ ಪ್ರಾಕೃತಿಕ ಸಂಕೇತವಾಗಿರುವ ನಿನ್ನಿಕಲ್ಲು ಪಾದೆಯನ್ನು ಜಾಗತಿಕ ಪಾರಂಪರಿಕ ಪ್ರಾಕೃತಿಕ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ World Cultural and Natural Heritage Center ಪರಿಕಲ್ಪನೆಯಡಿ ಅಭಿವೃದ್ಧಿಪಡಿಸುವ ಮಹತ್ವದ ಸಂಕಲ್ಪವನ್ನು ಜನಜಾಗೃತಿ ಸಭೆಯಲ್ಲಿ ಕೈಗೊಳ್ಳಲಾಯಿತು.

ತುಳುವರ್ಲ್ಡ್ ಫೌಂಡೇಶನ್ ಆಯೋಜಿಸಿದ “ನಿನ್ನಿಕಲ್ಲು ಪಾದೆ, ನಮ್ಮ ಪೆರ್ಮೆ” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಸಭೆಗೆ ಹಿರಿಯ ಜನಪದ ಸಂಶೋಧಕರಾದ ಡಾ. ವೈ ಎನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 15 ವರ್ಷಗಳ ಹಿಂದೆ ಈ ಪಾರಂಪರಿಕ ತಾಣವನ್ನು ಹಲವು ಹೋರಾಟಗಳ ಮುಖೇನ ಉಳಿಸಲಾಯಿತು, ಆದರೆ ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಮಯ ಕೂಡಿ ಬರಲಿಲ್ಲ. ಆದರೆ ಇದೀಗ ತುಳುವರ್ಲ್ಡ್ ಫೌಂಡೇಶನ್ ಈ ಕಾರ್ಯಕ್ಕೆ ಮುತುವರ್ಜಿ ವಹಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮಕ್ಕೆ ಎರ್ಮಾಳು ಬೀಡಿನ ರಾಜರಾದ ಅಶೋಕ್ ರಾಜ ದೀಪ ಬೆಳಗಿಸಿ ಚಾಲನೆ ನೀಡಿದರು. ತುಳುನಾಡಿನ ಪ್ರಾಚೀನ ಮೂಲ ಆರಾಧನೆಯ ಕೊಂಡಿಯಾಗಿರುವ ಈ ನಿನ್ನಿ ಕಲ್ಲು ಪಾದೆಯನ್ನು ಉಳಿಸಿ ಬೆಳೆಸುವುದು ಮತ್ತು ಇಲ್ಲಿರುವ ಶಕ್ತಿಪೀಠವನ್ನು ಅಭಿವೃದ್ಧಿಪಡಿಸುವುದು ಪ್ರತಿಯೊಬ್ಬ ತುಳುವನ ಧರ್ಮವಾಗಿದೆ ಆದುದರಿಂದ ಪ್ರತಿಯೊಬ್ಬರು ಇದಕ್ಕೆ ಸಹಕರಿಸಬೇಕೆಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಅರಂತಡೆಯ ಲಕ್ಷ್ಮಣ ಶೆಟ್ಟಿ, ತುಳುವ ಮಹಾಸಭೆಯ ಅರವಿಂದ ಬೆಳ್ಚಾಡ ಹಾಗೂ ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ ಅವರು, ನಿನ್ನಿಕಲ್ಲು ಪಾದೆ ಕೇವಲ ಕಲ್ಲು ಬಂಡೆಗಳಲ್ಲ; ಅವು ತುಳುನಾಡಿನ ಶೈವ–ಶಕ್ತ ಮತ್ತು ಪ್ರಕೃತಿ ಆರಾಧನಾ ಪರಂಪರೆ, ನಾಥ ಸಂಪ್ರದಾಯ ಮೊದಲಾದ ಪರಂಪರೆಗಳ ತಪಸ್ಸು, ಸಂಸ್ಕೃತಿ ಮತ್ತು ಜನಜೀವನದ ಜೀವಂತ ಸಾಕ್ಷ್ಯಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಇಂತಹ ಪ್ರಾಕೃತಿಕ ತಾಣಗಳನ್ನು ಉಳಿಸಿ, ಧಾರ್ಮಿಕ ನೆಲೆಯ ಅಧ್ಯಯನ–ಪ್ರವಾಸೋದ್ಯಮದೊಂದಿಗೆ ಅಭಿವೃದ್ಧಿಪಡಿಸುವುದು ಕಾಲಘಟ್ಟದ ಅಗತ್ಯವೆಂದು ಒಕ್ಕೊರಲ ಧ್ವನಿಗೂಡಿಸಿದರು.

ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ, ಪಾದೆಗಳ ಸಂರಕ್ಷಣೆ, ದಾಖಲಾತಿ, ಜನಜಾಗೃತಿ ಮತ್ತು ಕಾನೂನು ರಕ್ಷಣೆಯ ಕುರಿತು ಸೂಕ್ತ ಸಲಹೆಗಳನ್ನು ನೀಡಿದರು.

ಅಭಿವೃದ್ಧಿ ದೃಷ್ಟಿಯಿಂದ ನಾಗರಿಕ ಸಮಿತಿಯೊಂದನ್ನು ರೂಪಿಸಿ ಮುಂದಿನ ಹಂತದ ಕಾರ್ಯಗಳನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ, ಸ್ಥಳೀಯ ಸಾನಿಧ್ಯಗಳು, ಪುರಾತನ ಕುರುಹುಗಳು ಹಾಗೂ ಐತಿಹ್ಯಗಳ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸಲು ತಳಮಟ್ಟದಲ್ಲೇ ಅಧ್ಯಯನ ಮತ್ತು ಸಂಶೋಧನಾ ಪ್ರಕ್ರಿಯೆ ಮತ್ತು ಆರಾಧನಾ ಸಾನಿಧ್ಯಗಳ ಬಗ್ಗೆ ಸ್ಥಳದಲ್ಲಿಯೇ ತಾಂಬೂಲ ಪ್ರಶ್ನೆ ಚಿಂತನೆ ಕೈಗೊಳ್ಳುವ ಕುರಿತು ತೀರ್ಮಾನಿಸಲಾಯಿತು.

ತುಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪ್ರಾಕೃತಿಕ ಪಾರಂಪರ್ಯವನ್ನು ಉಳಿಸಿ ವಿಶ್ವಮಟ್ಟದಲ್ಲಿ ಗುರುತಿಸುವ ದಿಕ್ಕಿನಲ್ಲಿ ಈ ಜನಜಾಗೃತಿ ಸಭೆ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.

LEAVE A REPLY

Please enter your comment!
Please enter your name here