ಮಂಗಳೂರು ಫೆ 10 : ಭಾರತೀಯ ವೈದ್ಯಕೀಯ ಸಂಘ, ಮಂಗಳೂರು ಶಾಖೆ ಮತ್ತು ಮಹಿಳಾ ವೈದ್ಯರ ಸಂಘದ ಜಂಟಿ ಆಶ್ರಯದಲ್ಲಿ ಮಾನವೀಯ ಮೌಲ್ಯದ ಜೊತೆ ವೈದ್ಯಕೀಯ ಸೇವೆ ಸಲ್ಲಿಸಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ, ತರಬೇತಿ, ಮಾರ್ಗದರ್ಶನ ನೀಡಿದ ಹಿರಿಯ ಗುರು, ನಗರದ ಖ್ಯಾತ ಸ್ತ್ರಿ ಆರೋಗ್ಯ ಮತ್ತು ಪ್ರಸೂತಿ ತಜ್ಞೆ ದಿ. ಡಾ. ಹೆಚ್. ಟಿ. ಮನೋರಮಾ ರಾವ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮವು ತಾ: 09.02.2026 ರಂದು ಐ. ಎಮ್. ಎ. ಡಾ. ವಿ. ವಿ. ರಾವ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿಯವರ ನೇತೃತ್ವದಲ್ಲಿ ಜರಗಿತು.
ತುಮಕೂರು ನಗರದ ಖ್ಯಾತ ಸ್ತ್ರಿ ಆರೋಗ್ಯ ಮತ್ತು ಪ್ರಸೂತಿ ತಜ್ಞ ಹಾಗೂ ಕಸ್ತೂರ್ಬ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ದುರ್ಗಾದಾಸ್ ಅಸ್ರಣ್ಣ ಅವರು ಅತಿಥಿ ಉಪನ್ಯಾಸಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ದತ್ತಿ ಉಪನ್ಯಾಸದಲ್ಲಿ ಸಿಝರಿಯನ್ ಶಸ್ತ್ರ ಚಿಕಿತ್ಸೆಯಲ್ಲಿ ಪ್ರಸ್ತುತ ಬೆಳವಣಿಗೆ, ಪರಿಕಲ್ಪನೆ, ಪ್ರಗತಿ ಮತ್ತು ಸಾಧಕ, ಬಾಧಕಗಳ ಮಾಹಿತಿ ನೀಡಿ ಅಧಿಕ ಪ್ರಮಾಣದಲ್ಲಿ ದೇಶದಲ್ಲಿ ವಾರ್ಷಿಕ ಶೇ. 21.5 ಸಿಝರಿಯನ್ ಶಸ್ತ್ರ ಚಿಕಿತ್ಸೆಯು ಜರಗುತ್ತದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ, ಮತ್ತು ಸಾಧಿಸಿದ ಸಾಧನೆಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ನಿವೃತ್ತ ಮತ್ತು ಹಿರಿಯ ಸ್ತ್ರಿ ಆರೋಗ್ಯ ತಜ್ಞರು ಡಾ. ವಸಂತಿ ಶೆಟ್ಟಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ದಿ. ಡಾ. ಮನೋರಮಾ ರಾವ್ ರವರು ಕೆ.ಎಮ್.ಸಿ. ಕಾಲೇಜಿನಲ್ಲಿ ಉತ್ತಮ ಶಿಕ್ಷಕಿಯಾಗಿ ಹಾಗೂ ವಿಭಾಗಿಯ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದರು ಎಂದು ನುಡಿದರು. ನಗರದ ಲೇಡಿ ಗೋಶನ್ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷರಾದ ಡಾ. ದುರ್ಗಪ್ರಸಾದ್ ಎಮ್. ಆರ್. ಗೌರವ ಅತಿಥಿಯಾಗಿ ಪಾಲ್ಗೊಂಡು, ಅವರು ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಸಲ್ಲಿಸಿದ ಸುಧೀರ್ಘ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು.
ಸಂಸ್ಥೆಯ ಅದ್ಯಕ್ಷರಾದ ಡಾ. ಸದಾನಂದ ಪೂಜಾರಿಯವರು ಸ್ವಾಗತಿಸಿದರು. ಮಹಿಳಾ ವೈದ್ಯ ಸಂಘದ ಅದ್ಯಕ್ಷರಾದ ಡಾ. ಪ್ರೇಮಾ ಡಿ’ಕುನ್ಹಾ ರವರು ದಿ. ಡಾ. ಮನೋರಮಾ ರಾವ್ ರವರ ವೃತ್ತಿ ಸೇವೆ, ಶೈಕ್ಷಣಿಕ ಸೇವೆ, ಸಾಧನೆ ಮತ್ತು ವಿವಿಧ ಪ್ರಶಸ್ತಿಗಳಿಗೆ ಪಾತ್ರರಾದ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ನಗರದ ಜಯಶ್ರೀ ಆಸ್ಪತ್ರೆಯ ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಹೆಚ್. ಟಿ. ಜಯಪ್ರಕಾಶ್ ರಾವ್, ಸಂಸ್ಥೆಯ ಚುನಾಯಿತ ಅದ್ಯಕ್ಷರಾದ ಡಾ. ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿಯಾದ ಡಾ. ಜೂಲಿಯನ್ ಸಲ್ದಾನ್ನ ಉಪಸ್ಥಿತರಿದ್ದರು. ಡಾ. ಮಧುರಾ ಭಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್‌ಚಂದ್ರರವರು ವಂದಿಸಿದರು.

