ಹೆಬ್ರಿ : ಅನಾದಿ ಕಾಲದಿಂದ ಮೇರ ಸಮುದಾಯ ಆರಾಧಿಸಿಕೊಂಡು ಬರುತ್ತಿದ್ದ ಹೆಬ್ರಿ ಬಲ್ಲೆ ಶ್ರೀ ಕಾಡ್ಯ ನಾಗ ದೇವರ ಗುಡಿಯ ಜೀರ್ಣೋದ್ದಾರ, ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯು ಫೆ. 9 ರಂದು ಜರಗಿತು.
ಹೆಬ್ರಿ ತಾಣ ದೇವಸ್ಥಾನ ವಠಾರದಿಂದ ಕುಂಭ ಕಲಶಗಳನ್ನು ಹೊತ್ತ ಭಕ್ತರು, ಭಜನಾ ತಂಡಗಳು ಭಜನೆ ಮಾಡುತ್ತಾ, ಚೆಂಡೆ, ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ಶ್ರೀ ನಾಗ ದೇವರ ಗುಡಿಗೆ ಆಗಮಿಸಿದರು. ತಂತ್ರಿಗಳು, ಅರ್ಚಕರು ಪೂಜಾ ವಿಧಾನಗಳೊಂದಿಗೆ ಶ್ರೀ ನಾಗ ದೇವರ ಪ್ರತಿಷ್ಠಾ ಕಾರ್ಯ ನಡೆಸಿದರು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಎಡಪದವು ವಿದ್ವಾನ್ ಸುಬ್ರಮಣ್ಯ ತಂತ್ರಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಧಾರ್ಮಿಕ ಪ್ರವಚನ ಮಾಡುತ್ತಾ ನಾಗ ದೇವರು ಹಿಂದೂ ಸಂಪ್ರದಾಯದಲ್ಲಿ ವಿಶೇಷವಾಗಿ ದಕ್ಷಿಣ ಭಾರತ ದಲ್ಲಿ ಪೂಜಿಸಲ್ಪಡುವ ಪ್ರಮುಖ ದೇವತೆ, ಪ್ರೇರಣಾಶಕ್ತಿಯಾಗಿ, ಭಕ್ತರ ಬೆನ್ನ ಹಿಂದೆ ಇದ್ದು ರಕ್ಷಣೆ ನೀಡುತ್ತಾರೆ ಎಂದು ನಂಬಲಾಗುತ್ತಿದೆ, ನಾಗ ದೇವರನ್ನು ಸಂತೋಷವಾಗಿಡುವುದು ಮುಖ್ಯ, ಸಂಪತನ್ನು ರಕ್ಷಿಸುವ ದೇವರು ನಾಗ ದೇವರು ಪ್ರಕೃತಿಯೊಂದಿಗಿನ ಗಾಢವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ, ನಾಗ ದೇವರು ನಿಮ್ಮೆಲ್ಲರ ಬಾಳಿನಲ್ಲಿ ಸುಖ ಶಾಂತಿ ಸಂತೋಷ ಮತ್ತು ಸಮೃದ್ಧಿ ಕೊಡಲಿ ಎಂದರು.
ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರಾದ ರಘುರಾಮ ಸೋಮಯಾಜಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಬಲ್ಲೆ ಊರಿನಲ್ಲಿ ಬಲ್ಲೆಯಲ್ಲಿ ತುಂಬಿಹೋಗಿದ್ದ ಮುಳಿಹುಲ್ಲಿನ ನಾಗ ದೇವರ ಗುಡಿಯು ಪೂಜೆ ಪುರಸ್ಕಾರವಿಲ್ಲದೆ ಮುಚ್ಚಿ ಹೋಗಿದ್ದು ಆಸುಪಾಸಿನ ಜನರಿಗೆ ಅಸೌಖ್ಯ, ಕಷ್ಟ ನಷ್ಟಗಳು ತಲೆದೊರಿದಾಗ 59 ವರ್ಷಗಳ ನಂತರ ಅಜಲು ಭಕ್ತರನ್ನು ಒಟ್ಟು ಸೇರಿಸಿ, ಸೋಮಯಾಜಿ ಕುಟುಂಬವು ಎಲ್ಲರ ನಿರ್ಣಯದಂತೆ ಅರೂಢ ಪ್ರಶ್ನಾ ಚಿಂತನೆಯ ಮಾರ್ಗದರ್ಶನದಂತೆ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು,ಭಕ್ತರ ಮತ್ತು ದಾನಿಗಳ ನೆರವಿನೊಂದಿಗೆ 3 ತಿಂಗಳ ಅವಧಿಯೊಳಗೆ ಹಣ ದುರುಪಯೋಗವಿಲ್ಲದೆ ನಾಗ ದೇವರ ನೂತನ ಗುಡಿ, ಪ್ರತಿಷ್ಟಾ ಕಾರ್ಯ ನಡೆಸಲು ಸಾಧ್ಯವಾಯಿತು, ಇಂದು ಆರಂಭ ಮಾತ್ರ ಇನ್ನು ಈ ನಾಗದೇವರ ಪೂಜೆ ಪುರಸ್ಕಾರಗಳು ನಿರ್ವಿಘ್ನವಾಗಿ ನಡೆಯಲಿದ್ದು ಭಕ್ತರೆಲ್ಲರೂ ಆಗಮಿಸಿ ನಾಗದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿ ಕೊಳ್ಳುತ್ತೇನೆ ಎಂದರು.
ಧಾರ್ಮಿಕ ಸಭೆಯ ಅಧ್ಯಕ್ಷ ತೆಯನ್ನು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಅರ್ಚಕ ವೆಂಕಟೇಶ ಆಚಾರ್ಯರವರು ವಹಿಸಿದ್ದು,ಅವರು ಮಾತನಾಡಿ ಅಜೀರ್ಣಾವಸ್ಥೆಯಲ್ಲಿರುವ ಗುಡಿಯನ್ನು ಜೀರ್ಣೋದ್ದಾರ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ನಂಬಿಕೆಗೆ ಇಂಬು ಕೊಡುವ ದೇವರು ನಾಗ ದೇವರು,ನಂಬಿಕೆ ಮತ್ತು ಭಕ್ತಿಯಿಂದ ಪ್ರಾರ್ಥಿಸಿದರೆ ನಮ್ಮ ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ, ಗುಡಿ ನಿರ್ಮಾಣಕ್ಕೆ ಎಲ್ಲರೂ ಶ್ರಮಪಟ್ಟು ಸಹಕರಿಸಿದ್ದಾರೆ. ದಾನಿಗಳು ಹೆಚ್ಚಿನ ಧನ ಸಹಾಯ ನೀಡಿದ್ದಾರೆ. ಎಲ್ಲರನ್ನೂ ಜೀರ್ಣೋದ್ದಾರ ಸಮಿತಿ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಜೀರ್ಣೋದ್ದಾರ ಕಾರ್ಯಕ್ಕೆ ಧನ ಸಹಾಯ ಮತ್ತು ವಸ್ತು ರೂಪದಲ್ಲಿ ಸಹಕಾರ ನೀಡಿದ ದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು ಹಾಗೂ ಎಲ್ಲಾ ರೀತಿಯಿಂದ ಸಹಕರಿಸಿದ ಮಹನೀಯರನ್ನು ಗುರುತಿಸಿ ಅಭಿನಂದಿಸಲಾಯಿತು.
ಗೌರವ ಅಧ್ಯಕ್ಷರಾದ ಎಚ್. ಗಂಗಾಧರ ಸೋಮಯಾಜಿ, ಹೆಬ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಪ್ರಿಯ, ಕಾರ್ಯದರ್ಶಿ ಹರಿದಾಸ ಹೆಗ್ಡೆ , ಗುಡಿಯ ಅರ್ಚಕರಾದ ರಾಜು ಮೇರ ಉಪಸ್ಥಿತರಿದ್ದರು.
ಕೋಶಾಧಿಕಾರಿ ಶ್ರೀನಿವಾಸ ಭಂಡಾರಿ ಸ್ವಾಗತಿಸಿ, ಪ್ರಸಾದ್ ಶೆಟ್ಟಿ ನಿರೂಪಿಸಿ, ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ಗುಳಿಬೆಟ್ಟು ಸರ್ವರನ್ನು ವಂದಿಸಿದರು. ಜೀರ್ಣೋದ್ದಾರ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

