ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಸಂಭವಿಸಿದೆ. 14 ವರ್ಷದ ಮಗಳು ಕಾರುಣ್ಯಳನ್ನು ತಾಯಿ ಸುವರ್ಣ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗೆ ತಾಯಿ-ಮಗಳ ಮೃತದೇಹ ರವಾನಿಸಲಾಗಿದೆ.
ಸುಮಾರು 18 ವರ್ಷಗಳ ಹಿಂದೆ ಚಂದ್ರಶೇಖರ್ ಮತ್ತು ಸುವರ್ಣ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಮಗ ತುಮಕೂರಿನ ಹಾಸ್ಟೆಲ್ನಲ್ಲಿ ಓದುತ್ತಿದ್ದರೆ, ಮಗಳು ಕಾರುಣ್ಯ, ತಾಯಿ ಸುವರ್ಣ ಮತ್ತು ಚಂದ್ರಶೇಖರ್ ವೈಟ್ಫಿಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ ಪತಿ ಚಂದ್ರಶೇಖರ್ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಬಳಿಕ ಪತ್ನಿ ಸುವರ್ಣಗೆ ಕರೆ ಮಾಡಿದ್ದರು, ಎಷ್ಟೇ ಬಾರಿ ಕರೆ ಮಾಡಿದರು ಸ್ವೀಕರಿಸದಿದ್ದಾಗ ಸೋದರನಿಗೆ ಮನೆಗೆ ತೆರಳಿ ನೋಡುವಂತೆ ಹೇಳಿದ್ದರು. ಪತಿ ಚಂದ್ರಶೇಖರ್ ತಮ್ಮ ಮನೆಗೆ ಬಂದು ನೋಡಿದಾಗ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ, ಘಟನೆ ಸಂಬಂಧ, ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮೃತ ಸುವರ್ಣ ಗಂಡ ಚಂದ್ರಶೇಖರ್ಗೆ ಇತ್ತೀಚೆಗೆ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಆಗಿತ್ತು, ಖರ್ಚು ವೆಚ್ಚಕ್ಕೆ ಹಣಕಾಸು ಕೊರತೆ ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದ ಸುವರ್ಣ ಮಗಳನ್ನು ಕೊಂದು ನೇಣಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಣಕಾಸು ವಿಚಾರಕ್ಕೆ ಬೇಜಾರಾಗಿದ್ದಳು.
ಇನ್ನು, ಈ ಘಟನೆ ಬಗ್ಗೆ ಮೃತ ಸುವರ್ಣ ಅಕ್ಕ ಉಷಾ ಅವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಹಣಕಾಸು ವಿಚಾರಕ್ಕೆ ಸುವರ್ಣ ಬೇಜಾರಾಗಿದ್ದಳು. ಹಣಕಾಸು ವಿಚಾರಕ್ಕೆ ಬೇಜಾರಾಗಿ ಖಿನ್ನತೆಗೆ ಒಳಗಾಗಿದ್ದಳು, ನಮ್ಮ ಮನೆ ಅತ್ತಿಬೆಲೆಗೆ ಫ್ರೀ ಟಿಕೆಟ್‌ನಲ್ಲಿ ಬರುತ್ತಿದ್ದಳು. ಹಣಕಾಸು ಬಗ್ಗೆ ನನಗೆ ಆಗಾಗ್ಗೆ ಹೇಳುತ್ತಿದ್ದಳು, ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ, ಆದರೆ ಮಗಳನ್ನು ಸಾಯಿಸಿದ್ದು ತುಂಬಾ ಬೇಜಾರಾಗಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಮೃತ ಸುವರ್ಣ ಅಕ್ಕ ಉಷಾ ಆಗ್ರಹಿಸಿದ್ದಾರೆ.

