ಸಾವಿನಲ್ಲೂ ‘ವಿಕೃತ ಪ್ರೇಮ’ : ಗೆಳತಿಯನ್ನು ಕೊಂದು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಪ್ರೇಮಿ

0
42

ಬಟಿಂಡಾ : ಪಂಜಾಬ್’ನ ಬಟಿಂಡಾ ಸಮೀಪ ಸೂಟ್ಕೇಸ್’ನಲ್ಲಿ ಪತ್ತೆಯಾದ 22 ವರ್ಷದ ಯುವತಿಯ ಅರೆಸುಟ್ಟ ಮೃತದೇಹದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಆಕೆಯ ಗೆಳೆಯ ಪ್ರಿನ್ಸ್ ಕುಮಾರ್ (35) ಎಂಬಾತನನ್ನು ಬಂಧಿಸಲಾಗಿದೆ. ಕೊಲೆಯ ನಂತರ ಆರೋಪಿ ತೋರಿದ ವಿಕೃತ ವರ್ತನೆ ಪೊಲೀಸರನ್ನೇ ನಿಬ್ಬೆರಗಾಗಿಸಿದೆ.

ಮೃತ ಯುವತಿ ಮೋಗಾ ಜಿಲ್ಲೆಯ ಬಾಘಾಪುರಾಣ ಮೂಲದವಳಾಗಿದ್ದು, ಬಟಿಂಡಾದಲ್ಲಿ ವಾಸವಾಗಿದ್ದಳು. ಆರೋಪಿ ಪ್ರಿನ್ಸ್ ಕುಮಾರ್ ನಿರುದ್ಯೋಗಿಯಾಗಿದ್ದು, ಮಾದಕ ವ್ಯಸನಕ್ಕೆ ತುತ್ತಾಗಿದ್ದನು.ಫೆಬ್ರವರಿ 9ರ ಬೆಳಗಿನ ಜಾವ ಸುರಖ್ಪೀರ್ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಪ್ರಿನ್ಸ್, ಯುವತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಕೊಲೆಯ ನಂತರ ಎರಡು ದಿನಗಳ ಕಾಲ ಶವವನ್ನು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದು , ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಸುಡಲು ಯತ್ನಿಸಿದ್ದಾನೆ. ನಂತರ ಅರೆಸುಟ್ಟ ದೇಹವನ್ನು ಸೂಟ್ಕೇಸ್ನಲ್ಲಿ ತುಂಬಿಸಿ, ಫೆಬ್ರವರಿ 10-11ರ ಮಧ್ಯರಾತ್ರಿ ಬಟಿಂಡಾ-ಫಾಜಿಲ್ಕಾ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಹೊಲವೊಂದರಲ್ಲಿ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರ ತನಿಖೆಯ ವೇಳೆ ಅತ್ಯಂತ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಕೊಲೆ ಮಾಡಿದ ನಂತರ, ಆರೋಪಿ ಪ್ರಿನ್ಸ್ ತನ್ನ ಗೆಳತಿ ಮತ್ತು ತನ್ನ ಭಾವಚಿತ್ರವನ್ನು ಎದೆಯ ಮೇಲೆ ಟ್ಯಾಟೂ (ಹಚ್ಚೆ) ಹಾಕಿಸಿಕೊಂಡಿದ್ದಾನೆ. ಪೊಲೀಸರು ಇದನ್ನು “ಕ್ರೈಮ್ ಆಫ್ ಪ್ಯಾಶನ್” (ಆವೇಶದ ಕೊಲೆ) ಎಂದು ಕರೆದಿದ್ದಾರೆ.

ಫೆಬ್ರವರಿ 7ರಂದು ಯುವತಿ ಕೊನೆಯ ಬಾರಿಗೆ ಪ್ರಿನ್ಸ್ ಜೊತೆ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ತನಿಖೆಗೆ ದೊಡ್ಡ ತಿರುವು ನೀಡಿತು.ಯುವತಿಯ ಫೋನ್ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು 15 ಜನರನ್ನು ವಿಚಾರಣೆ ನಡೆಸಿದರು. ಅಂತಿಮವಾಗಿ ಪ್ರಿನ್ಸ್ ಈ ಕೃತ್ಯ ಎಸಗಿರುವುದು ಸಾಬೀತಾಯಿತು.ಕೊಲೆಗೆ ಬಳಸಿದ ಚಾಕು, ಶವ ಸಾಗಿಸಲು ಬಳಸಿದ ಕಾರು ಮತ್ತು ಸೂಟ್ಕೇಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿಗಳ (SSP) ಪ್ರಕಾರ, ಮೃತ ಯುವತಿಯ ಜೀವನ ಸಂಕಷ್ಟಗಳಿಂದ ಕೂಡಿತ್ತು. ಆಕೆ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು. ನಂತರ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ದುರಂತವೆಂದರೆ, ಈವರೆಗೆ ಆಕೆಯ ಮೃತದೇಹವನ್ನು ಪಡೆಯಲು ಕುಟುಂಬದವರು ಯಾರೂ ಮುಂದೆ ಬಂದಿಲ್ಲ.

LEAVE A REPLY

Please enter your comment!
Please enter your name here