ಮುನಿಯಾಲು ಸಂಜೀವಿನಿ ಗೋಧಾಮ : ” ಕೃಷಿ ಸಂಸ್ಕೃತಿಯ ಜ್ಞಾನದ ಪೀಠ”

0
10
  • ಸುಕುಮಾರ್‌ ಮುನಿಯಾಲ್‌

ಮುನಿಯಾಲು ಸಂಜೀವಿನಿ ಗೋಧಾಮ : ಪುರಾತನ ಶೈಲಿಯಲ್ಲಿ ಆಧುನಿಕತೆ ಟಚ್‌ ನೀಡಿ ವಿಶಿಷ್ಟ ಯೋಚನೆ ಯೋಜನೆಯ ಮೂಲಕ ಅಪರೂಪವಾಗಿ ನಿರ್ಮಿಸಿರುವ ಕೃಷಿ ಸಂಸ್ಕೃತಿ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆಯ ಕೇಂದ್ರವಾಗಿ ಮುನಿಯಾಲಿನ ಸಂಜೀವಿನಿ ಗೋಧಾಮ ಮೈತಳೆದು ನಿಂತಿದೆ. ಕೃಷಿ ಆಸಕ್ತರು ಸೇರಿ ಸರ್ವರನ್ನು ಆಕರ್ಷಿಸುತ್ತಿದೆ. ಜಾಗತಿಕ ಮಟ್ಟದಲ್ಲೂ ವಿಶೇಷ ಮನ್ನಣೆಯನ್ನು ಗೋಧಾಮ ಪಡೆಯುತ್ತಿದೆ. ಸಮುದಾಯಕ್ಕೆ” ಕೃಷಿ ಸಂಸ್ಕೃತಿಯನ್ನು ಸಮಗ್ರವಾಗಿ ನೀಡುವ “ಜ್ಞಾನದ ಪೀಠ” ವಾಗಿ ಗೋಧಾಮ ಮಾರ್ಪಟ್ಟಿದೆ. ಮುನಿಯಾಲಿನ ಗೋಧಾಮ ಎಂಬ ಕೃಷಿಲೋಕವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ‌ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ ೧೯ರಿಂದ ೨೧ ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲವು ನಡೆಯಲಿದೆ.

240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿಕ ಋಷಿ ಬಿ.ಕೆ.ದೇವರಾಯ ಮಿತ್ತಬಾಗಿಲು ಅವರು ಮೂಡಬಿದರೆ ಎಸ್‌ ಕೆಎಫ್‌ ಸಂಸ್ಥೆ ನೀಡುವ ನೂತನ ಪ್ರಥಮ ರೈತಪೀಠ ಪ್ರಶಸ್ತಿಯನ್ನು ಸ್ವೀಕರಿಸುವರು. ತಮ್ಮ ಬದುಕನ್ನೇ ಕೃಷಿ ಕಾಯಕಕ್ಕೆ ಅರ್ಪಿಸಿರುವ ರೈತರ ತ್ಯಾಗ, ಪರಿಶ್ರಮ ಮತ್ತು ರೈತರ ಮಹತ್ವವನ್ನು ಗುರುತಿಸುವ ಮಹತ್ವದ ಉದ್ದೇಶದಿಂದ “ರೈತಪೀಠ” ಎಂಬ ಗೌರವ ಪ್ರಶಸ್ತಿಯನ್ನು ಸ್ಥಾಪಿಸಿ ರೈತರನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶ. ನಮ್ಮ ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗಬೇಕು, ಕೃಷಿಯನ್ನೂ ಕೂಡ ಕಾರ್ಪೋರೇಟ್‌ ವ್ಯವಸ್ಥೆಯ ಹಂತಕ್ಕೆ ಬೆಳೆಸಬೇಕು, ಶ್ರೀಮನ್ನಾಗಮಂಡಲದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮುನಿಯಾಲು ಗೋಧಾಮ ಮತ್ತು ಮೂಡಬಿದರೆ ಎಸ್‌ ಕೆಎಫ್‌ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್‌ ತನ್ನ ವಿನೂತನ ಯೋಜನೆ ಯೋಚನೆಯ ಮಾಹಿತಿ ನೀಡಿದರು.

ಪ್ರಕೃತಿಯನ್ನು ಜೀವಾಳವನ್ನಾಗಿ ಮಾಡಿಕೊಂಡು, ತಮ್ಮ ಬದುಕನ್ನೇ ಕೃಷಿ ಸೇವೆಗೆ ಅರ್ಪಿಸಿರುವ ರೈತನ ತ್ಯಾಗ, ಪರಿಶ್ರಮ ಮತ್ತು ಮಹತ್ವವನ್ನು ಗುರುತಿಸಿ, ರೈತನ ಶ್ರೇಷ್ಠತೆ ತಿಳಿಸಲು ರೈತಪೀಠ ಪ್ರಶಸ್ತಿಯನ್ನು ನೀಡಿ, ರೈತನು ಕೂಡ ಕಾರ್ಪೋರೇಟ್ ಮಟ್ಟಕ್ಕೆ ಬೆಳೆಯಬೇಕೆಂಬ ಸಂಕಲ್ಪದೊಂದಿಗೆ ಅವರ ಬೆಳವಣಿಗೆಗೆ ಭಗಿರಥ ಪ್ರಯತ್ನವನ್ನು ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್ ಮಾಡುತ್ತಿದ್ದಾರೆ. ರೈತಪೀಠ ಪ್ರಶಸ್ತಿಯನ್ನು ಪ್ರಕೃತಿಯ ರಕ್ಷಕನಾದ ನಾಗದೇವರ ಆಶೀರ್ವಾದ ಪಡೆಯಲು ಮತ್ತು ಸನಾತನ ಸಂಸ್ಕೃತಿಯ ಮೂಲಭೂತ ತತ್ವವಾದ ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ಸಾರಲಾಗುತ್ತಿದೆ.

ಸನಾತನ ಸಂಸ್ಕೃತಿಯ ಕೇಂದ್ರ ಬಿಂದು ಪ್ರಕೃತಿ. ಮಣ್ಣು, ನೀರು, ಅಗ್ನಿ, ವಾಯು ಮತ್ತು ಆಕಾಶ ಪಂಚಭೂತಗಳಿಂದಲೇ ಪ್ರಪಂಚ ನಿರ್ಮಿತವಾಗಿರುವುದರಿಂದ, ಈ ಪಂಚಭೂತಗಳನ್ನು ಕಾಪಾಡುವ ಉದ್ದೇಶದಿಂದಲೇ ಪಾರಂಪರಿಕವಾಗಿ ದೊಂದಿ (ದೀವಟಿಗೆ) ದೀಪಗಳಿಂದಲೇ ಮಂಟಪವನ್ನು ಅಲಂಕರಿಸಿಕೊಂಡು, ಪ್ರಕೃತಿಯಿಂದಲೇ ಸಿಗುವ ಹಣ್ಣು ಪತ್ರಾದಿಗಳಿಂದ ಸುಂದರ ಮಂಟಪ ನಿರ್ಮಾಣ, ಪ್ರಸಾದವಾಗಿ ಬೀಜದುಂಡೆ ಒಳಗೊಂಡ ಮಣ್ಣಿನ ಸೀಡ್ ಬಾಲ್ ನೀಡಲಾಗುತ್ತದೆ.

ಗೋಧಾಮದಲ್ಲಿ ವಿಶಿಷ್ಟ ಶ್ರೀಮನ್ನಾಗಮಂಡಲ : ಶುದ್ಧ ಭೂಮಿ ಸೃಷ್ಟಿ: ಉಳುಮೆ ಮಾಡಿ, ಮಣ್ಣು ಹದಮಾಡಿ, ಬೀಜ ಬಿತ್ತನೆ ಮಾಡಿ ಹಾಗೂ ಹಸುಗಳು ಮೇಯುವ ಮೂಲಕ ಭೂಮಿಯನ್ನು ಪವಿತ್ರೀಕರಿಸಲಾಗಿದೆ.
ರಾಸಾಯನಿಕ ರಹಿತ ಬಣ್ಣಗಳ ತಯಾರಿ : ಅಕ್ಕಿಪುಡಿ (ಬಿಳಿ); ಅರಿಶಿನ (ಹಳದಿ); ಅರಿಶಿನದೊಂದಿಗೆ ಸುಣ್ಣ (ಕೆಂಪು); ಎಲೆಪುಡಿ (ಹಸಿರು); ಹೊಟ್ಟು ಸುಟ್ಟು (ಕಪ್ಪು), ಈ ಐದು ಶುದ್ಧ ಬಣ್ಣಗಳಿಂದಲೇ ನಾಗಮಂಡಲ ರಚನೆ ಮಾಡಲಾಗುತ್ತಿದೆ. ದೊಂದಿ ಬೆಳಕಿನ ಅಲಂಕಾರ : ಪಾರಂಪಾರಿಕ ವಿಧಾನದಂತೆ ದೊಂದಿ ಮತ್ತು ತೈಲದ ದೀಪಗಳಿಂದ ಮಂಟಪವನ್ನು ಅಲಂಕರಿಸಿ, ದೇವರಿಗೆ ನೆರಳು ಬೀಳದಂತೆ ಶುದ್ಧ ಆರಾಧನಾ ವಿಧಾನವನ್ನು ಪಾಲಿಸಲಾಗುತ್ತದೆ. ಶಬ್ದಮಾಲಿನ್ಯ ರಹಿತ ಸಂಗೀತ : ಗೋವು ಪ್ರಾಣಿ ಪಕ್ಷಿ ಸಂಕುಲಕ್ಕೆ ಹಿಂಸೆಯಾಗದಂತೆ ಉಡಿಕೆ, ಶಂಖ, ತಾಳ, ನಾಗಸ್ವರಗಳಂತಹ ಮೃದು ಸ್ತರಗಳಿಂದಲೇ ಶ್ರೀಮನ್ನಾಗಂಂಡಲದ ಸೇವೆ ನಡೆಯಲಿದೆ.ಮಹಾ ಅನ್ನದಾನ : ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಫೆಬ್ರವರಿ ೨೧ರ ೧೨:೩೦ ರಿಂದ ಶ್ರೀಮನ್ನಾಗಮಂಡಲದ ಸಂಪನ್ನದ ವರೆಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಬೀಜದುಂಡೆ ಮಹಾಪ್ರಸಾದ : ಸುಬ್ರಹ್ಮಣ್ಯ ದೇವರ ಮೃತ್ತಿಕೆಯು ಸೇರಿದ ಮಣ್ಣಿನಿಂದ ತಯಾರಿಸಿದ ಬೀಜದುಂಡೆಯನ್ನು ಪ್ರಕೃತಿಯನ್ನು ಉಳಿಸುವ ಪವಿತ್ರ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. 5 ಸಾವಿರ ಬೀಜದುಂಡೆಗಳ ವಿತರಣೆಯ ಸಂಕಲ್ಪ ಮಾಡಲಾಗಿದೆ. ಶ್ರೀ ನಾಗದೇವರಿಗೆ ಅತ್ಯಂತ ಪ್ರಿಯವಾದ ಹಿಂಗಾರ ಹೂವಿನ ಬಳಕೆಯನ್ನು ಮಿತಿಗೊಳಿಸಿ, ಕೇವಲ ೧ ಸಾವಿರ ಹಾಳೆ ಹಿಂಗಾರವನ್ನು ಮಾತ್ರ ಉಪಯೋಗಿಸಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಒಂದು ಸಾವಿರ ಅಡಿಕೆ ಸಸಿಗಳನ್ನು ವಿತರಿಸುವ ಮೂಲಕ ಪ್ರಕೃತಿ ಸಂರಕ್ಷಣೆಯ ಪ್ರತಿಜ್ಞೆ ಮಾಡಲಾಗುತ್ತದೆ. ಈ ಮೂಲಕ, ರೈತನ ಗೌರವ, ಪ್ರಕೃತಿಯ ಸಂರಕ್ಷಣೆ ಮತ್ತು ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಒ೦ದೇ ವೇದಿಕೆಯಲ್ಲಿ ಮಾಡುವುದೇ ರೈತಪೀಠ ಮತ್ತು ನಾಗಮಂಡಲ ಸೇವೆಯ ಮೂಲ ಉದ್ದೇಶವಾಗಿದೆ.

ಮುನಿಯಾಲು ಗೋಧಾಮ ಪ್ರಯೋಗ ಶಾಲೆಯಾಗಿದೆ. : ಕೃಷಿಯನ್ನು ನಂಬಿಕೊಂಡು ಸಮಗ್ರ ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮುನಿಯಾಲು ಗೋಧಾಮ ಪ್ರಯೋಗ ಶಾಲೆಯಾಗಿದೆ. ಆಧುನಿಕ ಯುಗದಲ್ಲಿ ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಯಾವ ರೀತಿಯಲ್ಲಿ ಕೃಷಿಯನ್ನು ಮಾಡಬಹುದು ಎಂದು ಎಂದು ತೋರಿಸುವುದು ಮತ್ತು ಯುವಜನರನ್ನು ಕೃಷಿಯತ್ತ ಆಕರ್ಷಿಸುವುದು ನಮ್ಮ ಮುಖ್ಯ ಉದ್ದೇಶ. ಗೋಧಾಮವು ಸಮಗ್ರ ಕೃಷಿಯ ಮಾಹಿತಿ ಕೇಂದ್ರವಾಗಿ ಮಾರ್ಪಟ್ಟಿದೆ. ಕೃಷಿ, ಪಕ್ಷಿ ವೀಕ್ಷಣೆ, ಕೋಳಿ ಸಾಕಾಣಿಕೆ, ಜೇನು ಕೃಷಿ, ವಿವಿಧ ರೀತಿಯ ಹಣ್ಣುಗಳು, ಕುರಿ ಸಾಕಾಣಿಕೆ, ಕುದುರೆ, ಹೈನುಗಾರಿಕೆ, ಮೀನುಗಳ ಸಾಕಾಣಿಕೆ ಮೂಲಕ ಸಮಗ್ರ ಕೃಷಿಯಿಂದ ಒಬ್ಬ ರೈತ ಹೇಗೆ ಬೆಳೆಯಬಹುದೆಂಬುದಕ್ಕೆ ಗೋಧಾಮ ಸಾಕ್ಷಿಯಾಗಿದೆ.

ನಾಗಮಂಡಲ ಪಾರಂಪರಿಕವಾಗಿ ಮೂಲ ಪ್ರಕೃತಿಯ ಮಡಿಲಲ್ಲಿ ಯಾವುದೇ ಅಬ್ಬರ ಆಡಂಬರವಿಲ್ಲದೆ ಸಾಂಪ್ರದಾಯಿಕ ವಾದ್ಯಗಳು, ರಾಸಾಯನಿಕ ರೈಹಿತವಾಗಿ, ದುಂದು ವೆಚ್ಚಗಳಿಲ್ಲದೆ ಅವಶ್ಯಕತೆಗೆ ಅನುಗುಣವಾಗಿ ದೇವರಿಗೆ ಸರಳ ರೀತಿಯಲ್ಲಿ ನಾಗಮಂಡಲ ನಡೆಯಲಿದೆ.

ಪುರಾತನ ಶಾಸ್ತ್ರವನ್ನು ತಿಳಿಸುವ, ಪ್ರಕೃತಿಗೆ ಹತ್ತಿರವಾಗಿ ಹೇಗೆ ನಡೆಸಬಹುದು ಎಂಬುದನ್ನು ಸಮಾಜಕ್ಕೆ ತೋರಿಸುವುದು ನಮ್ಮ ಆದ್ಯತೆಯಾಗಿದೆ. ಕೃಷಿ ಸಂಕಿರಣವನ್ನು ಏರ್ಪಡಿಸಿ, ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸುವುದು, ಹಳ್ಳಿಯ ಬದುಕು ಮತ್ತೆ ಏಕೆ ಬೇಕೆಂಬುದು ತಿಳಿಸುವುದು ಮುಂದಿನ ದಿನಮಾನದ ಅನಿವಾರ್ಯವಾಗಿದೆ ಎಂದು ಡಾ.ಜಿ.ರಾಮಕೃಷ್ಣ ಆಚಾರ್‌ ಉದ್ದೇಶ.

ಸಂಸ್ಕೃತಿಯನ್ನು ಪೋಷಿಸುವ ಕಾರ್ಯ : ಗೋಧಾಮ ಪಶ್ಚಿಮ ಘಟ್ಟದ ತಪ್ಪಲಿನಲ್ಲಿದೆ. ಇಕೋ ಸೆನ್ಸಿಟಿವ್ ಜೋನ್ ನಲ್ಲಿ ಇರುವಾಗ ನಾವು ಕೈಗಾರಿಕೆಗೆ ಹೆಚ್ಚು ಮಹತ್ವ ನೀಡುತ್ತಿದ್ದೇವೆ. ಪ್ರಕೃತಿ, ಪರಿಸರ, ಕೃಷಿಯನ್ನು ಉಳಿಸಿಕೊಂಡು ಯುವಜನರು ಊರಿನಲ್ಲಿ ಉಳಿದುಕೊಂಡು ಸಂಸ್ಕೃತಿಯನ್ನು ಬೋಧಿಸುವ ಕೆಲಸ ಹೇಗೆ ಆಗಬೇಕೆಂಬುವುದಕ್ಕೆ ಮುನಿಯಾಲು ಶ್ರೀಮನ್ನಾಗಮಂಡಲ ಸಾಕ್ಷಿಯಾಗಲಿದೆ.

” ರೈತಪೀಠ ಇದು ಈ ನೆಲದ ಜ್ಞಾನಪೀಠ” ಕೃತಿ ಬಿಡುಗಡೆ : ಗೋಧಾಮದ ಪ್ರವರ್ತಕ ಡಾ. ಜಿ ರಾಮಕೃಷ್ಣ ಆಚಾರ್ಯ ಅವರ ಸಾಧನೆ ಯಶೋಗಾಥೆಯನ್ನು ದಾಖಲಿಸಿದ ಡಾ. ನರೇಂದ್ರ ರೈ ದೆರ್ಲ ರಚಿಸಿರುವ ” ರೈತಪೀಠ ಇದು ಈ ನೆಲದ ಜ್ಞಾನಪೀಠ” ಕೃತಿಯ ಬಿಡುಗಡೆ ನಡೆಯಲಿದೆ.

ಸಮಾಜದಲ್ಲಿ ರೈತರ ಶ್ರಮ ತ್ಯಾಗವನ್ನು ಗುರುತಿಸುವಲ್ಲಿ ನಾವೆಲ್ಲರೂ ಸೋತಿದ್ದೇವೆ. ರೈತರು ಕಾರ್ಪೊರೇಟ್ ವ್ಯವಸ್ಥೆಯ ಹಂತಕ್ಕೆ ಬಂದು ನಿಲ್ಲಬೇಕೆಂಬ ಮಹದಾಸೆ ನನ್ನದಾಗಿದೆ. ರೈತರಿಗೆ ಸಮಾಜದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ರೈತಪೀಠ ಪ್ರಶಸ್ತಿಯನ್ನು ಸ್ಥಾಪಿಸಿ ಆ ಪುಣ್ಯದ ಕೆಲಸ ನಾಗಮಂಡಲದ ಮೂಲಕ ಸಹಕಾರ ಗೊಳಿಸುತ್ತಿದ್ದೇವೆ. ರೈತ ಬೆಳೆದರೆ ಮಾತ್ರ ನಮಗೆಲ್ಲ ಉಳಿಗಾಲ.

ಡಾ. ಜಿ. ರಾಮಕೃಷ್ಣ ಆಚಾರ್. ಮುನಿಯಾಲು ಸಂಜೀವಿನಿ ಗೋಧಾಮದ ಪ್ರವರ್ತಕರು.

ಇದೊಂದು ಐತಿಹಾಸಿಕ ಕಾರ್ಯಕ್ರಮ. ಡಾ. ಜಿ. ರಾಮಕೃಷ್ಣ ಆಚಾರ್ಯರು ರೈತರ ಪರಿಶ್ರಮವನ್ನು ಅರಿತು ಮನ್ನಣೆ ನೀಡಲು ನಾಗಮಂಡಲದ ಮೂಲಕ ರೈತ ಪೀಠ ಪ್ರಶಸ್ತಿ ನೀಡಲು ಹೊರಟಿರುವುದು ಈ ನೆಲಕ್ಕೆ ನೀಡಿದ ದೊಡ್ಡ ಗೌರವ. ಕೃಷಿ ಮತ್ತು ಸಂಸ್ಕೃತಿಯನ್ನು ಒಟ್ಟಾಗಿ ತೆಗೆದುಕೊಂಡು ಶ್ರೀಮನ್ನಾಗಮಂಡಲದಲ್ಲಿ ನಾವೆಲ್ಲ ಒಟ್ಟಾಗಿ ನಿಂತು ಬೆಂಬಲಿಸೋಣ.

ಸುನಿಲ್ ಕುಮಾರ್, ಶಾಸಕರು. ಗೌರವಾಧ್ಯಕ್ಷರು, ಮುನಿಯಾಲು ಏಕಪವಿತ್ರ ಶ್ರೀಮನ್ನಾಗಮಂಡಲ.

ಯುವಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ವಿಶೇಷ ಯೋಚನೆ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶ ಮುನಿಯಾಲಿನಲ್ಲಿ ಸಂಜೀವಿನಿ ಗೋಧಾಮವನ್ನು ಕೃಷಿ ಸಂಶೋಧನಾ ಕೇಂದ್ರದಂತೆ ನಿರ್ಮಿಸಿದ್ದಾರೆ. ಆ ಮೂಲಕ ಕೈಗಾರಿಕೋಧ್ಯಮಿಯೊಬ್ಬರು ಕೃಷಿಗೆ ಆದ್ಯತೆ ನೀಡುತ್ತಿರುವುದು ಮಹಾನ್‌ ಕಾರ್ಯ. ಗೋಧಾಮದ ಮೂಲಕ ಮುನಿಯಾಲಿನ ಹೆಸರು ಜಾಗತಿಕಮಟ್ಟದಲ್ಲಿ ರಾರಾಜಿಸುವಂತೆ ಆಗಿದೆ. ರೈತರು, ಕೃಷಿ ಮತ್ತು ಯುವಸಮುದಾಯವನ್ನು ಕೃಷಿಯತ್ತ ಮರಳಿ ತಂದು ಬದುಕು ಕಟ್ಟಲು ಪ್ರೇರಣೆ ನೀಡುವ ಮಹಾಸಂಕಲ್ಪದಿಂದ ನಡೆಯುವ ಪಾರಂಪರಿಕ ಶ್ರೀಮನ್ನಾಗಮಂಡಲವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ.

ಮುನಿಯಾಲು ಉದಯಕುಮಾರ್ ಶೆಟ್ಟಿ, ಅಧ್ಯಕ್ಷರು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌.

LEAVE A REPLY

Please enter your comment!
Please enter your name here