ಉಡುಪಿ: 1848 ರಲ್ಲಿ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಎಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆ ಬಿಡುಗಡೆಯ ನೆನಪಿನಲ್ಲಿ ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನಾಚರಣೆ ನಡೆಸಲಾಗುತ್ತಿದೆ.
ಜಗತ್ತಿನಲ್ಲಿ ಬೈಬಲ್ ನಂತರದಲ್ಲಿ ಅತೀ ಹೆಚ್ಚು ಮುದ್ರಣ ಕಂಡು ಜಗತ್ತಿನ ವಿವಿಧ ಭಾಷೆಗಳಲ್ಲಿ ಮುದ್ರಿಸಿ ದಾಖಲೆ ಮಾಡಿದ ಮೇರುಕೃತಿ ಆಗಿದೆ ಎಂದು ಪ್ರಗತಿಪರ ಚಿಂತಕರಾದ ಫಣಿರಾಜ್ ಅವರು ಹೇಳಿದರು.
ಅವರು ಉಡುಪಿ ಹಳೇ ಕೆಎಸ್ಸಾರ್ಟಿಸಿ ಬಳಿ ಇರುವ ಸಿಪಿಎಂ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ಯು ಎಸ್ ಸಾಮ್ರಾಜ್ಯಶಾಹಿ ಭಾರತ ಜನತೆಯ ಶತ್ರು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಅಮೇರಿಕಾ ಸಾಮ್ರಾಜ್ಯಶಾಹಿಯು ಸಮಾಜವಾದಿ ದೇಶಗಳ ಮೇಲೆ ಅಲ್ಲಿನ ಸಂಪತ್ತನ್ನು ಲೂಟಿ ಮಾಡಲು ನಿರಂತರವಾಗಿ ಮಿಲಿಟರಿ ದಾಳಿ ನಡೆಸಿ ಬೆದರಿಕೆ ಹಾಕುತ್ತಿದೆ.
ಭಾರತದ ಮೇಲೆ ಮಿಲಿಟರಿ ದಾಳಿಯ ಬದಲಿಗೆ ಇಲ್ಲಿನ ರೈತರ, ಕಾರ್ಮಿಕರ ಪರ ಕಾನೂನುಗಳನ್ನು ಬದಲಾಯಿಸಿ ಸರಕಾರದ ನೀತಿಗಳನ್ನೇ ಅಮೇರಿಕಾ ಪರ ಮಾಡಿಕೊಂಡಿರುವುದು ಸಾಮ್ರಾಜ್ಯಶಾಹಿ ಕ್ರೂರ ಮುಖಗಳನ್ನು ಅನಾವರಣಗೊಳಿಸಿದೆ.
ಇದರ ಪರಿಣಾಮವಾಗಿ ಕಡಿಮೆ ಬೆಲೆಗೆ ರಷ್ಯಾದಿಂದ ಪಡೆಯುತ್ತಿದ್ದ ತೈಲವನ್ನು ಪಡೆಯಬಾರದು ಎಂದು ಬೆದರಿಕೆ ಹಾಕಿ ದುಬಾರಿ ಬೆಲೆಯ ತೈಲವನ್ನು ಪಡೆಯ ಬೇಕೆಂಬ ಷರತ್ತು ಜನತೆಯ ಮೇಲೆ ಹೊರೆ ಹಾಕಲು ಮುಂದಾಗಿದೆ ಹಾಗಾಗಿ ಇದು ಭಾರತ ಜನತೆಯ ಶತ್ರು ಎಂದು ನಾವು ತಿಳಿಯಬೇಕು.
ಸಾಮ್ರಾಜ್ಯಶಾಹಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸದೇ ಇದ್ದರೆ ಭಾರತ ದೇಶಕ್ಕೆ ಮುಂದೆ ಅಪಾಯವಿದೆ ಎಂದು ಎಚ್ಚರಿಸಿದರು ಇದರ ವಿರುದ್ಧ ಆಂದೋಲನ ನಡೆಯಬೇಕು ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಸುಂದರ್ ಮಾಸ್ತರ್, ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್ ನರಸಿಂಹ ಮಾತನಾಡಿದರು.
ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿ;
ಜಗತ್ತಿನ ಬದಲಾವಣೆಗಾಗಿ ತೊಡಗಿಸಿಕೊಂಡಿರುವ ಎಡಪಂಥೀಯರು ಚಳುವಳಿಗಾರರು,ಬರಹಗಾರರು ಇಂದು ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನ ಆಚರಿಸುತ್ತಿದ್ದಾರೆ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ಮತ್ತಷ್ಟು ಬಲಪಡಿಸಲು ನಾವೆಲ್ಲರೂ ಮುಂದಾಗಿ ಜನತೆಯ ಹಕ್ಕುಗಳನ್ನು ರಕ್ಷಿಸುವುದು ಅನಿವಾರ್ಯ ಮತ್ತು ಅಗತ್ಯವಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ದುಡಿಯವವರು ಕಾರ್ಯಕ್ರಮದಲ್ಲಿದ್ದು ಸಂವಾದದಲ್ಲಿ ಭಾಗವಹಿಸಿದ್ದರು.
ಬಿಡುಗಡೆ ಕಾರ್ಯಕ್ರಮದಲ್ಲಿ ಸಿಪಿಎಂ ಮುಖಂಡರಾದ ಕವಿರಾಜ್ ಎಸ್ ಕಾಂಚನ್, ವೆಂಕಟೇಶ್ ಕೋಣಿ, ಉಮೇಶ್ ಕುಂದರ್, ಸುಭಾಶ್ಚಂದ್ರ ನಾಯಕ್,ಶೀಲಾವತಿ,
ಸಹಬಾಳ್ವೆ ಸಂಘಟನೆಯ ಇದ್ರಿಸ್ ಹೂಡೆ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಇದ್ದರು.

