ಮುಂಬಯಿ : ಹಿಂದಿನ ಕಾಲದಲ್ಲಿ ‘ಆಟಿ’ (ಆಷಾಢ) ತಿಂಗಳೆಂದರೆ ಅದು ಕೇವಲ ಹಬ್ಬದ ದಿನಗಳಾಗಿರಲಿಲ್ಲ, ಬದಲಿಗೆ ಕಷ್ಟ-ಕಾರ್ಪಣ್ಯಗಳ, ಸಾಂಕ್ರಾಮಿಕ ರೋಗಗಳ ಹಾಗೂ ವಿಪರೀತ ಮಳೆಯ ದಿನಗಳಾಗಿದ್ದವು. ಕೃಷಿ ಕೆಲಸಗಳನ್ನು ಮುಂಚಿತವಾಗಿಯೇ ಮುಗಿಸಿ, ಮಳೆಯ ದಿನಗಳಲ್ಲಿ ಮನೆಯೊಳಗೆ ಆಹಾರದ ಕೊರತೆಯ ನಡುವೆಯೂ ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳು, ಸೊಪ್ಪುಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆ ಅಂದಿನ ಜನರಿಗಿತ್ತು.

ಆದರೆ ಇಂದು ಕಾಲ ಬದಲಾಗಿದೆ. ಅಂದಿನ ಆಟಿ ತಿಂಗಳ ಕಷ್ಟದ ದಿನಗಳು ಈಗ ಕೇವಲ ಒಂದು ದಿನದ ‘ಆಟಿದ ಕೂಟ’ ಅಥವಾ ವೈಭವೀಕರಣದ ಆಚರಣೆಯಾಗಿ ಮಾರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ, ಸಾಲ್ಯಾನ್ ರವರು ಆಟಿ ತಿಂಗಳ ನಿಜವಾದ ಹಿನ್ನೆಲೆ, ಅಂದಿನ ಜನರ ಬದುಕು ಮತ್ತು ಅದರ ಹಿಂದಿರುವ ಆಚರಣೆಗಳ ನೈಜ ಅರ್ಥವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಕೃತಿಯ ರೂಪದಲ್ಲಿ ತಂದಿರುವುದು ಶ್ಲಾಘನೀಯ. ಇಂದಿನ ಪೀಳಿಗೆಗೆ ಇತಿಹಾಸ ಮತ್ತು ಸಂಸ್ಕೃತಿಯ ನಿಜವಾದ ಅರಿವು ಮೂಡಿಸುವ ಇಂತಹ ಸಮಾಜಮುಖಿ ಕೃತಿಗಳು ಸಾಲ್ಯಾನ್ ಅವರಿಂದ ಮುಂದೆಯೂ ಮೂಡಿಬರಲಿ ಎಂದು ಮುಂಬಯಿ ಕರ್ನಾಟಕ ಮಲ್ಲ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರು ಹೇಳಿದರು.
ಅವರು ಜು.10ರಂದು ವಿದ್ಯಾದಾಯಿನಿ ಸಭಾ ಮುಂಬಯಿ ಮತ್ತು ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ವತಿಯಿಂದ ಫೋರ್ಟ್ ಮೋದಿ ಸ್ಟ್ರೀಟ್ ಮನಪಾ (ವಿದ್ಯಾದಾಯಿನಿ) ಶಾಲಾ ಸಭಾಗ್ರಹದಲ್ಲಿ ಆಯೋಜಿಸಿದ್ದ ಮುಲ್ಕಿ ಹರಿಶ್ಚಂದ್ರ ಪಿ.ಸಾಲ್ಯಾನ್ ಅವರು ತುಳುನಾಡಿನ ಆಟಿ ತಿಂಗಳು ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ್ಚಂದ್ರ ಬಂಗೇರ ರವರು ಕೃತಿಯ ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಕೃತಿಯ ಲೇಖಕ ಹಾಗೂ ಹೊಸ ಅಂಗಣ ಮಾಸಪತ್ರಿಕೆಯ ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸಾಲ್ಯಾನ್ ರವರು ಮುಂಬಯಿ ಸನ್ಮಾನಕ್ಕೆ ಸಂತಸ ವ್ಯಕ್ತ ಪಡಿಸಿ ಹೊಸ ಕೃತಿಗಳನ್ನು ಹೊರತರಲು ಹೆಚ್ಚಿನ ಶಕ್ತಿ ಲಭಿಸಿದೆ ಎಂದು ಹೇಳಿದರು. ಅತಿಥಿ ಭುವನೇಶ್ವರಿ ಸೇವಾ ಸಮಿತಿ,ಬೋರಾಬಜಾರ್ ಫೋರ್ಟ್ ಇದರ ಪ್ರಧಾನ ಅರ್ಚಕರಾದ ರಾಜೇಶ್ ಭಟ್ ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾಲ್ಯಾನ್ ಅವರಿಂದ ಇಂತಹ ಇನ್ನೂ ಅನೇಕ ಕೃತಿಗಳನ್ನು ರಚಿಸಲು ಮಾತೆ ಭುವನೇಶ್ವರಿ ಅನುಗ್ರಹಿಸಲಿ ಎಂದು ಶುಭಕೋರಿ ಆಶೀರ್ವದಿಸಿದರು.
ಅತಿಥಿ ಬಿಲ್ಲವರ ಅಸೋಸಿಯೇಶನ್ ಇದರ ಮೂಲುಂಡು ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶಂಕರ್ ಎಸ್.ಅಮೀನ್ ಮಾತನಾಡಿ ಕೃತಿ ರಚನೆ ಅಷ್ಟು ಸುಲಭದ ಕೆಲಸವೇನಲ್ಲ. ಮಾಹಿತಿ ಸಂಘಟಿಸಲು ಶ್ರಮ ಪಡಬೇಕು. ಆದರೂ ಸಾಲ್ಯಾನ್ ರು ಅವರ ಇಳಿ ವಯಸ್ಸಿನಲ್ಲಿ ಅಲ್ಪ ಸಮಯದಲ್ಲಿ 24ನೇ ಕೃತಿಯನ್ನು ಲೋಕಾರ್ಪಣೆ ಮಾಡಿರುವುದು ಬಹು ಸಂತಸದ ವಿಷಯ. ಇವರ ಕೃತಿಗಳು ನಮ್ಮ ಇಂದಿನ ಹಾಗೂ ಮುಂದಿನ ಯುವಜನಾಂಗಕ್ಕೆ ದಾರಿದೀಪವಾಗಬಹುದು ಎಂದು ಹೇಳಿದರು.
ಅತಿಥಿಗಳಾದ ತುಳು ಸೇವಾ ಸಮಾಜ ಮೀರಾಭಾಯಂದರ್ ಇದರ ಸಂಚಾಲಕ ಹಾಗೂ ವಿಶ್ವ ತುಳು ಫೌಂಡೇಶನ್ ಇದರ ಉಪಾಧ್ಯಕ್ಷ ಜಯಪ್ರಕಾಶ್ ಪೂಜಾರಿ ಹಾಗೂ ಫೋರ್ಟ್ ಭುವನೇಶ್ವರಿ ಪೂಜಾ ಸಮಿತಿಯ ಅಧ್ಯಕ್ಷ ಡಾ.ಪ್ರಕಾಶ್ ಮೂಡಬಿದ್ರಿಯವರು ಸಂದರ್ಭೋಚಿತವಾಗಿ ಮಾತನಾಡಿ ಸಾಲ್ಯಾನರ ಕೃತಿ ಸೇವೆಗೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರನ್ನು ಸತ್ಕರಿಸಲಾಯಿತು. ವಿದ್ಯಾದಾಯಿನಿ ಸಭಾದ ಜೊತೆ ಕಾರ್ಯದರ್ಶಿ ಶರತ್ ಪೂಜಾರಿ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಚಿತ್ರಾಪು ಕೆ.ಎಮ್.ಕೋಟ್ಯಾನ್ ವಂದಿಸಿದರು. ಉಮೇಶ್ ಕೆ .ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್ ಮಾತನಾಡಿ ದಶಮಾನೋತ್ಸವ ಸಮಾರಂಭಕ್ಕೆ ಅತಿಥಿಯಾಗಿರುವ ಹೊಸ ಅಂಗಣ ಪತ್ರಿಕೆಯ ಸಂಪಾದಕ ಬಾ.ಹರಿಶ್ಚಂದ್ರ ಟಿ.ಸಾಲ್ಯಾನರ ತುಳುನಾಡಿನ ಆಟಿ ತಿಂಗಳು ಎಂಬ ಅವರ 24ನೇ ಕೃತಿಯು ನಮ್ಮ ಸಂಸ್ಥೆಯ ಮೂಲಕ ಇಂದು ಬಿಡುಗಡೆ ಆಗಿರುವುದು ತುಂಬಾ ಸಂತಸ ತಂದಿದೆ. ಇವರ ಈ ಕಾರ್ಯಕ್ಕೆ ಸಹಕರಿಸುತ್ತಿರುವ ಅವರ ಧರ್ಮಪತ್ನಿಯನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಹಾಗೂ ಇವರಿಂದ ಸಮಾಜಕ್ಕೆ ಬೇಕಾದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಶುಭಹಾರೈಸಿದರು.

