ಬೆಂಗಳೂರು : ವಿಲ್ಲಾದಲ್ಲಿ ವಿದ್ಯಾರ್ಥಿನಿ ಅ‌ತ್ಯಾಚಾರ ಪ್ರಕರಣ : ರಾಜಕಾರಣಿ ಪುತ್ರ ಸೇರಿ ಐವರು ಸೆರೆ

0
128

ಇತ್ತೀಚೆಗೆ ವಿಲ್ಲಾದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿ ಪುತ್ರ ಸೇರಿ ಈವರೆಗೂ ಒಟ್ಟು ಐವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮೂಲದ ಡಿಕ್ಷನ್‌ ಸ್ಯಾಂಡ್ರೋ (21), ಸಕಲೇಶಪುರ ಮೂಲದ ನಿಖಿಲ್‌ (34) ನನ್ನು ಈ ಮೊದಲು ಬಂಧಿಸಲಾಗಿತ್ತು.

ಇವರು ನೀಡಿದ ಮಾಹಿತಿ ಮೇರೆಗೆ ಕೃತ್ಯಕ್ಕೆ ಪರೋಕ್ಷವಾಗಿ ಸಹಕರಿಸಿದ ಆರೋಪದ ಮೇರೆಗೆ ಶಿವಮೊಗ್ಗ ಮೂಲದ ಶ್ರವಣ್‌ (21), ದಾವಣಗೆರೆ ಮೂಲದ ಅನಿರುದ್ಧ್‌ (33) ಮತ್ತು ಗುಜರಾತ್‌ ಮೂಲದ ಮೋಹಿತ್‌ ಜೈನ್‌ (23)ನನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಅನಿರುದ್ಧ್‌ ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯನ ಪುತ್ರನಾಗಿದ್ದಾನೆ ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿ ನಿಖಿಲ್‌ನ ಸ್ನೇಹಿತನಾಗಿರುವ ಈತನ ಮೇಲೆ ವಿಲ್ಲಾವನ್ನು ಬುಕ್ ಮಾಡಿದ ಆರೋಪವಿದೆ. ಕಂಟ್ರ್ಯಾಕ್ಟರ್ ಆಗಿರುವ ಅನಿರುದ್ಧ್‌ಗೆ ವಿಚಾರಣೆಗೆ ಹಾಜರಾಗುವಂತೆ ಮೊದಲು ನೋಟಿಸ್ ನೀಡಲಾಗಿತ್ತು. ಅತ್ಯಾಚಾರ ನಡೆದಿದೆ ಎನ್ನಲಾದ ಸ್ಥಳವಾದ ವಿಲ್ಲಾ ಬುಕಿಂಗ್ ಮಾಡಿದ್ದ ಸಂಬಂಧ ವಿಚಾರಣೆ ನಡೆಸಲು ಅನಿರುದ್ಧ್‌ಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆ ಬಳಿಕ ಹೆಚ್ಚಿನ ತನಿಖೆಗಾಗಿ ಅನಿರುದ್ಧ್‌ ಸೇರಿ ಮತ್ತಿಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಿರುದ್ಧ ಹೆಸರಿನಲ್ಲೇ ವಿಲ್ಲಾ ಬುಕ್‌ ಮಾಡಲಾಗಿತ್ತು. ಅಲ್ಲದೆ, ಘಟನೆಯ ದಿನ ಆರೋಪಿ ನಿಖಿಲ್‌ ಸಂತ್ರಸ್ತೆಯನ್ನು ಲುಲೂಮಾಲ್‌ ಬಳಿ ಬಿಟ್ಟು ಬರಲು ತೆಗೆದುಕೊಂಡು ಹೋಗಿದ್ದ ಕಾರು, ಮೋಹಿತ್‌ಗೆ ಸೇರಿದ್ದು ಎಂದು ಹೇಳಲಾಗಿದೆ. ಇನ್ನು ಶ್ರವಣ್‌ ಮತ್ತು ಮೋಹಿತ್ ಕೂಡ ನಿಖಿಲ್‌ಗೆ ಪರಿಚಯಸ್ಥರಾಗಿದ್ದು, ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ನಿಖಿಲ್‌ ಬಳಸುತ್ತಿದ್ದ ಐಫೋನ್‌ನಲ್ಲಿ ಈ ಹಿಂದೆ ಕೆಲ ಯುವತಿಯರನ್ನು ಇದೇ ರೀತಿ ಪರಿಚಯಸಿಕೊಂಡು ವಂಚಿಸಿರುವ ಬಗ್ಗೆ ಸಾಕ್ಷಿ ಇವೆ ಎನ್ನಲಾಗಿದೆ. ಆದರೆ, ಆ ಮೊಬೈಲ್‌ ಕಳೆದುಕೊಂಡಿದ್ದಾಗಿ ಆರೋಪಿ ಹೇಳುತ್ತಿದ್ದಾನೆ. ಮತ್ತೊಂದೆಡೆ ಶ್ರವಣ್‌ ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದು, ಕೆಲ ಪ್ರಭಾವಿಗಳನ್ನು ಆಹ್ವಾನಿಸುತ್ತಿದ್ದ. ಈ ಹಿಂದೆಯೂ ಈತನ ವಿರುದ್ಧ ಕೆಲವೊಂದು ಆರೋಪ ಕೇಳಿ ಬಂದಿತ್ತು. ಆದರೆ, ಸಂತ್ರಸ್ತೆಯರು ಯಾರು ದೂರು ನೀಡಿಲ್ಲ ಎನ್ನಲಾಗಿದೆ. ಪಾರ್ಟಿ ನಡೆದಿರುವ ವಿಲ್ಲಾ, ಹಿರಿಯ ಐಪಿಎಸ್‌ ಅಧಿಕಾರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ.

ಇನ್‌ಸ್ಟಾಗ್ರಾಮ್ ಮೂಲಕ ಆರೋಪಿಗಳು, ಯುವತಿಯರ ಸ್ನೇಹ ಬೆಳೆಸಿ ನಂತರ ಫೋಟೊಶೂಟ್, ಮಾಡೆಲಿಂಗ್ ಹಾಗೂ ಪಾರ್ಟಿ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಆರಂಭದಲ್ಲಿ ಅವರ ನಂಬಿಕೆ ಗಳಿಸಲು ಪಬ್‌ ಮತ್ತು ಕೆಫೆಗಳಲ್ಲಿ ಭೇಟಿಯಾಗಿ ಸಭ್ಯರಂತೆ ವರ್ತಿಸುತ್ತಿದ್ದರು. ಬಳಿಕ ಸ್ನೇಹ ಮುಂದುವರಿಸಿ ಪಾರ್ಟಿ ನೆಪದಲ್ಲಿ ವಿಲ್ಲಾಗಳಿಗೆ ಕರೆದೊಯ್ಯುತ್ತಿದ್ದರು. ಈ ರೀತಿಯ ಕೃತ್ಯಕ್ಕೆ ನಿಖಿಲ್‌ ಇತರ ಆರೋಪಿಗಳಿಗೆ ಹಣದ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here