ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಕೆಲವು ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವು ಮನರಂಜನೆ ನೀಡುತ್ತವೆ. ಇದೀಗ ಟಿವಿ ನೋಡಿದಾಗ ಮಾತ್ರ ಹಾಲು ಕೊಡುವ ಎಮ್ಮೆಯೊಂದು ನೆಟ್ಟಿಗರ ಗಮನ ಸೆಳೆದಿದ್ದು, ಅದರ ವಿಚಿತ್ರ ಅಭ್ಯಾಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಎಮ್ಮೆ ಟಿವಿ ನೋಡುತ್ತಿರುವಾಗ ಮಾತ್ರ ಶಾಂತವಾಗಿ ನಿಂತು ಹಾಲು ಕೊಡುತ್ತದೆ ಎಂದು ಹೇಳಲಾಗಿದ್ದು, ಈ ದೃಶ್ಯ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಮಕ್ಕಳು ಊಟ ಮಾಡುವಾಗ ಮೊಬೈಲ್ ಅಥವಾ ಟಿವಿಯಲ್ಲಿ ಕಾರ್ಟೂನ್ ಹಾಕಿದರೆ ಮಾತ್ರ ಶಾಂತವಾಗಿ ಕುಳಿತುಕೊಳ್ಳುವ ದೃಶ್ಯಗಳನ್ನು ನಾವು ನೋಡಿದ್ದೇವೆ. ಆದರೆ ಇದೀಗ ಎಮ್ಮೆಯೂ ಇದೇ ರೀತಿಯ ಅಭ್ಯಾಸ ಬೆಳೆಸಿಕೊಂಡಿರುವಂತೆ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
ವಿಡಿಯೋದಲ್ಲಿ ಯುವಕನೊಬ್ಬ ಮಹಿಳೆಯನ್ನು, “ಎಮ್ಮೆ ಏಕೆ ಹಾಲು ಕೊಡುತ್ತಿಲ್ಲ?” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಮಹಿಳೆ, “ಈಗ ಹಾಲು ಕೊಡಲ್ಲ” ಎಂದು ಉತ್ತರಿಸುತ್ತಾರೆ. ಬಳಿಕ “ಹಾಗಾದರೆ ಯಾವಾಗ ಹಾಲು ಕೊಡುತ್ತದೆ?” ಎಂದು ಕೇಳಿದಾಗ, “ಟಿವಿ ನೋಡಿದ ನಂತರವೇ ಹಾಲು ಕೊಡುತ್ತದೆ” ಎಂದು ಮಹಿಳೆ ಹೇಳುವುದು ಕೇಳಿಸುತ್ತದೆ.
ನಂತರ ಮನೆ ಮುಂಭಾಗದಲ್ಲಿ ಟಿವಿ ಆನ್ ಮಾಡಿ, ಅದರ ಎದುರು ಎಮ್ಮೆಯನ್ನು ನಿಲ್ಲಿಸಿರುವ ದೃಶ್ಯ ಕಾಣಿಸುತ್ತದೆ. ಎಮ್ಮೆ ಸಂಪೂರ್ಣ ಗಮನವನ್ನು ಟಿವಿಯತ್ತ ಹರಿಸಿದ ವೇಳೆ ಮಹಿಳೆ ಯಾವುದೇ ತೊಂದರೆಯಿಲ್ಲದೆ ಹಾಲು ಕರೆಯುತ್ತಿರುವುದು ವಿಡಿಯೋದಲ್ಲಿ ಗೋಚರಿಸುತ್ತದೆ.
ಈ ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಇದನ್ನು ಮನರಂಜನೆಯ ಘಟನೆ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಇದು ಎಮ್ಮೆ ತರಬೇತಿಯಿಂದ ಬಂದ ಅಭ್ಯಾಸವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಡಿಯೋದಲ್ಲಿರುವ ಹೇಳಿಕೆಯ ಸತ್ಯಾಸತ್ಯತೆ ಸ್ವತಂತ್ರವಾಗಿ ದೃಢಪಟ್ಟಿಲ್ಲ.

