ಮಣಿಪಾಲ : ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜು (SMC) ಮತ್ತು ಮಣಿಪಾಲ ಇನ್ನಿಟ್ಯೂಟ್ ಆಫ್ ಟೆಕ್ನಾಲಜಿ (MIT), MAHE ನಡುವೆ ಮಹತ್ವದ ಶೈಕ್ಷಣಿಕ ಒಪ್ಪಂದ (MoU)ಕ್ಕೆ ಸಹಿ ಹಾಕಲಾಗಿದೆ.
ಈ ಒಪ್ಪಂದದ ಮೂಲಕ SMCಯ ಬಿಸಿಎ ವಿಭಾಗವನ್ನು ಬಲಪಡಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ.
ಈ ಸಹಕಾರದ ಅಂಗವಾಗಿ 2026ರ ಜೂನ್‌ನಿಂದ SMCಯಲ್ಲಿ ಕೃತಕ ಬುದ್ಧಿಮತ್ತೆ (Al) ಮತ್ತು ಯಂತ್ರ ಕಲಿಕೆ (ML) ವಿಷಯಗಳಲ್ಲಿ ವಿಶೇಷ BCA ಕೋರ್ಸ್ ಆರಂಭಿಸಲಾಗುತ್ತದೆ. ಜೊತೆಗೆ ಕೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ ಮತ್ತು ಡೇಟಾ ಸೈನ್ಸ್ ಮೊದಲಾದ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ MIT ಸಹಯೋಗದೊಂದಿಗೆ ಸಂಯುಕ್ತ ಪ್ರಮಾಣಪತ್ರ ಕಾರ್ಯಕ್ರಮಗಳು, ಇಂಟರ್ನ್ ಶಿಪ್‌ಗಳು ಹಾಗೂ ಮಾಸ್ಟರ್‌ಕ್ಲಾಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲ್ಯ ವೃದ್ಧಿ ಅವಕಾಶಗಳನ್ನು ಕಲ್ಪಿಸಲಾಗುತ್ತದೆ.
“ಈ ಒಪ್ಪಂದದ ಮೂಲಕ SMC ವಿದ್ಯಾರ್ಥಿಗಳು ಭವಿಷ್ಯಮುಖಿ ತಂತ್ರಜ್ಞಾನ ಕೌಶಲ್ಯಗಳನ್ನು ಪಡೆದು ಹೆಚ್ಚಿನ ಉದ್ಯೋಗಾವಕಾಶಗಳನ್ನು ಹೊಂದಲು ಸಾಧ್ಯವಾಗುತ್ತದೆ,” ಎಂದು ಈ MoU ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ SMC ಹಳೆ ವಿದ್ಯಾರ್ಥಿ ಶ್ರೀ ಸಂಜಯ್ ಭಟ್ ಹೇಳಿದರು.
“SMC ಮತ್ತು MIT ಒಟ್ಟಾಗಿ ಗ್ರಾಮೀಣ ಪ್ರದೇಶದ ಪ್ರತಿಭೆಯನ್ನು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಸುವ ದಿಟ್ಟ ಹೆಜ್ಜೆ ಇಟ್ಟಿರುವುದು ಸಂತಸದ ಸಂಗತಿ. ಈ ಪ್ರಯತ್ನಕ್ಕೆ MAHE ಸಂಪೂರ್ಣ ಬೆಂಬಲ ನೀಡಲಿದೆ.” ಎಂದು MAHE ಪ್ರೊ-ಚಾನ್ಸಲರ್ ಡಾ. ಎಚ್. ಎಸ್. ಬಳ್ಳಾಲ್ ಅವರು SMC ಪ್ರತಿನಿಧಿಗಳೊಂದಿಗೆ MoU ವಿನಿಮಯ ಮಾಡಿಕೊಂಡ ಸಂದರ್ಭದಲ್ಲಿ ಹೇಳಿದರು.
MAHEಯ ಬೆಂಬಲದಿಂದ SMC ಶೈಕ್ಷಣಿಕ ಅಭಿವೃದ್ಧಿಯ ಮುಂದಿನ ಹಂತಕ್ಕೆ ಏರಲಿದೆ,” ಎಂದು SMC ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಅಭಯಚಂದ್ರ ಜೈನ್ ತಿಳಿಸಿದರು. “ಈ ಒಪ್ಪಂದದಡಿ ಕೈಗೊಳ್ಳುವ ಯೋಜನೆಗಳಿಗೆ MIT ಮತ್ತು SMC ಅಧ್ಯಾಪಕರು ಹಾಗೂ ಪರಿಣಿತ ಹಳ ವಿದ್ಯಾರ್ಥಿಗಳ ಸಂಯುಕ್ತ ತಂಡ ಮಾರ್ಗದರ್ಶನ ನೀಡಲಿದೆ” ಎಂದು SMC ಪ್ರಾಂಶುಪಾಲ ಡಾ. ರಾಧಾಕೃಷ್ಣ ತಿಳಿಸಿದರು.
ಈ ಸಂದರ್ಭದಲ್ಲಿ MAHE ಪ್ರೊ-ವೈಸ್ ಚಾನ್ಸಲರ್ ಡಾ. ನಾರಾಯಣ ಸಭಾಹಿತ್. MAHE ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ, AGE ಆಡಳಿತಾಧಿಕಾರಿ ಡಾ. ಕೆ.ಶ್ರೀಧರ ರಂಗನಾಥ ಪೈ. MIT ನಿರ್ದೇಶಕ ಡಾ. ಅನಿಲ್ ರಾಣಾ, MIT ಸ್ಕೂಲ್ ಆಫ್ ಕಂಪ್ಯೂಟರ್ ಎಂಜಿನಿಯರಿಂಗ್ ಡೀನ್ ಡಾ. ರಾಧಿಕಾ ಪೈ. ಡಾ. ಚಿತ್ರಾ ಕೆ., ಡಾ. ರಾಮಕೃಷ್ಣ ಹೊಳ್ಳ, ಹಾಗೂ SMC ಬಿಸಿಎ ವಿಭಾಗ ಮುಖ್ಯಸ್ಥೆ ಪ್ರೊ. ಕೀರ್ತಲಾ ಉಪಸ್ಥಿತರಿದ್ದರು.

