ಮಂಗಳೂರು : ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಾರ್ಚ್ ೯ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಂಗಳ ಮಹಿಳಾ ಮಂಡಳಿ ಉರ್ವ ಮಂಗಳೂರು ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವು ಸಂಸ್ಥೆಯ ಗೀತೆಯೊಂದಿಗೆ ಆರಂಭಗೊಂಡಿತು.ವಿದ್ಯಾರ್ಥಿನಿಯರ ಪ್ರಯತ್ನದಿಂದ ರೂಪುಗೊಂಡ ಮಹಿಳಾ ಸಾಧಕರ ಗೋಡೆಯನ್ನು ಅನಾವರಣಗೊಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮತ್ತು ಕಾರ್ಯಕ್ರಮಕ್ಕೆ ಪ್ರಮುಖ ಆಕರ್ಷಣೆಯು ಆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿರುವ ಡಾ.ಅರುಣಾ ನಾಗರಾಜ್ ಅವರು ಮಾತನಾಡಿ ಮಹಿಳಾ ಸಬಲೀಕರಣದ ಮಹತ್ವವನ್ನು ವಿವರಿಸಿ, ಮಹಿಳೆಯರು ಪರಸ್ಪರ ಸಹಕಾರ ಮತ್ತು ಬೆಂಬಲದ ಮನೋಭಾವದಿಂದ ಸಮಾಜದಲ್ಲಿ ಪ್ರಗತಿಯನ್ನು ಸಾಧಿಸಬೇಕೆಂದು ಕರೆ ನೀಡಿದರು. ಗೌರವ ಅತಿಥಿಯಾಗಿ ಝಾನ್ಸಿ ಮ್ಯಾನೇಜರ್ ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಂಸ್ಥೆಯ ಆಡಳಿತಾಧಿಕಾರಿಯಾದ ಯು. ಕೆ. ಖಾಲಿದ್ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳೆಯರ ಸಾಧನೆಗಳನ್ನು ಪ್ರಶಂಸಿಸಿ, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾನ್ ಅವರು ವಿದ್ಯಾರ್ಥಿನಿಯರಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಬಳಿಕ ಸಮಾನತೆಯ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಊರಿನ ಇಬ್ಬರು ಮಹಿಳೆಯರನ್ನು ಗುರುತಿಸಿ ಅಭಿನಂದಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥೆ ಸುಚಿತ್ರ ಶೆಟ್ಟಿ ಅವರು ಅವರ ಪರಿಚಯವನ್ನು ಮಾಡಿದರು. ನಳಿನಿ ವಿ. ಪೈ ಅವರು ನಿವೃತ್ತ ಬ್ಯಾಂಕ್ ನಿರ್ವಾಹಕರಾಗಿದ್ದು, ವಿವಿಧ ಸೇವಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿನ ಆಶ್ರಿತರಿಗೆ ಅಗತ್ಯವಿರುವ ದವಸಧಾನ್ಯಗಳನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಬ್ಬರಾದ ಪ್ರೇಮ ಬಿ. ಪ್ರಕಾಶ್ ಅವರು ಗೃಹಿಣಿಯಾಗಿದ್ದು, ಕಳೆದ ಒಂಬತ್ತು ವರ್ಷಗಳಿಂದ ತಮ್ಮದೇ ಕಟ್ಟಡದಲ್ಲಿ ಕಲಿಯುವ ಮಕ್ಕಳಿಗೆ ಉಚಿತ ಆಹಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ ಸಮಾಜ ಸೇವೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

