ರಾಜ್ಯದಲ್ಲಿ ದಿವಾಳಿ ಸರ್ಕಾರ ಆಡಳಿತ ನಡೆಸುತ್ತಿದೆ : ಮಟ್ಟಾರು ರತ್ನಾಕರ ಹೆಗ್ಡೆ ಟೀಕೆ

0
17

ಉಡುಪಿ : ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಶುಕ್ರವಾರ ಕಡಿಯಾಳಿ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ರಾಜ್ಯದಲ್ಲಿ ದಿವಾಳಿ ಸರ್ಕಾರ ಆಡಳಿತ ನಡೆಸುತ್ತಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲದಿದ್ದರೂ ಕರಾವಳಿ ಜಿಲ್ಲೆಗಳಿಗೆ ₹32 ಸಾವಿರ ಕೋಟಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ ₹1 ಲಕ್ಷ ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸುತ್ತಿದ್ದಾರೆ. ಹಣವಿಲ್ಲದ ಮೇಲೆ ಅನುದಾನ ಎಲ್ಲಿಂದ ತಂದು ನೀಡುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಇದ್ದರೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಬರ ಪರಿಸ್ಥಿತಿ ವೀಕ್ಷಿಸಲಾಗುತ್ತಿದೆ. ಅದೇ ಹಣವನ್ನು ರೈತರಿಗೆ ನೀಡಬಹುದಿತ್ತು. ಬರ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್‌ನ ಕೆಲ ವಿಧಾನ ಪರಿಷತ್ ಸದಸ್ಯರೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಸಲಹೆ ನೀಡುತ್ತಿರುವುದು ಸರ್ಕಾರದ ಮೇಲಿನ ವಿಶ್ವಾಸದ ಕೊರತೆಯನ್ನು ತೋರಿಸುತ್ತದೆ ಎಂದರು.

ಬಿಜೆಪಿ ಮುಖಂಡ ಕೆ. ಉದಯಕುಮಾರ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಜಿಲ್ಲೆಗಳಲ್ಲಿ ಘೋಷಿಸಿರುವ ಯೋಜನೆಗಳು ಮತ್ತು ಅನುದಾನ ‘ಠುಸ್ ಪಟಾಕಿ’ಯಂತಿವೆ. ಸುಮಾರು ₹2 ಲಕ್ಷ ಕೋಟಿ ಕಾಮಗಾರಿಗಳ ಬಿಲ್ ಬಾಕಿ ಇದೆ ಎಂಬ ಆರೋಪಗಳ ನಡುವೆ ಸರ್ಕಾರಿ ನೌಕರರ ವೇತನ ನೀಡಲೂ ಹಣವಿಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳಿಗೆ ₹32 ಸಾವಿರ ಕೋಟಿ ಅನುದಾನ ಘೋಷಿಸಿರುವುದನ್ನು ನಂಬಲು ಸಾಧ್ಯವಿಲ್ಲ. ಇದು ಕೇವಲ ಪ್ರಚಾರಕ್ಕಾಗಿ ಮಾಡಿರುವ ಘೋಷಣೆ ಎಂದು ಟೀಕಿಸಿದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮುಖಂಡರಾದ ಸಂಧ್ಯಾ ರಮೇಶ್, ದಿನಕರ ಶೆಟ್ಟಿ ಹೆರ್ಗ, ಶಿಲ್ಪಾ ಸುವರ್ಣ, ಪ್ರಭಾಕರ ಪೂಜಾರಿ, ವಿಜಯ ಕೊಡವೂರು, ಶ್ರೀಕಾಂತ್ ನಾಯಕ್, ದಿನಕರ ಬಾಬು, ಮಧುಕರ ಮುದ್ರಾಡಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರಶ್ಮಿ ಬಾಲಕೃಷ್ಣ, ಗಿರೀಶ್ ಅಂಚನ್, ದಿನೇಶ್ ಅಮೀನ್, ಪ್ರಜ್ಞಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.