ತೆವಳುತ್ತಾ ಬಂದು ನಡುರಸ್ತೆಯಲ್ಲಿ ಕುಳಿತ ಮಗು ; ಕ್ಷಣಾರ್ಧದಲ್ಲಿ ಬ್ರೇಕ್ ಹಾಕಿ ಜೀವ ಉಳಿಸಿದ ಬಸ್ ಚಾಲಕ..!

0
73

ತಿರುವನಂತಪುರಂ : ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಸಾಕ್ಷಿಯಾದ ಘಟನೆ ನಡೆದಿದ್ದು, ನಡುರಸ್ತೆಯಲ್ಲಿ ಕುಳಿತಿದ್ದ ಪುಟ್ಟ ಮಗುವಿನ ಪ್ರಾಣವನ್ನು ಬಸ್ ಚಾಲಕರೊಬ್ಬರು ಕ್ಷಣಾರ್ಧದಲ್ಲಿ ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಮೆಚ್ಚುಗೆ ಗಳಿಸಿದೆ.

ಜೂನ್ 10ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಗೇಟ್ ದಾಟಿ ತೆವಳುತ್ತಾ ಬಂದ ಮಗು ವಾಹನಗಳು ವೇಗವಾಗಿ ಸಂಚರಿಸುವ ರಸ್ತೆಯ ಮಧ್ಯಭಾಗದಲ್ಲಿ ಕುಳಿತಿತ್ತು. ಅದೇ ಸಮಯದಲ್ಲಿ ಬಸ್ಸೊಂದು ಆ ಮಾರ್ಗದಲ್ಲಿ ವೇಗವಾಗಿ ಬರುತ್ತಿತ್ತು.

ರಸ್ತೆಯ ಮಧ್ಯದಲ್ಲಿ ಮಗುವನ್ನು ಗಮನಿಸಿದ ಚಾಲಕ ಧೃತಿಗೆಡದೆ ತಕ್ಷಣ ಎಮರ್ಜೆನ್ಸಿ ಬ್ರೇಕ್ ಹಾಕಿದ್ದು, ಬಸ್ಸು ಮಗುವಿನಿಂದ ಕೆಲವೇ ಇಂಚುಗಳ ಅಂತರದಲ್ಲಿ ನಿಂತಿದೆ. ಚಾಲಕನ ಸಮಯೋಚಿತ ಕ್ರಮದಿಂದ ಸಂಭವಿಸಬಹುದಾದ ಭಾರೀ ದುರಂತ ತಪ್ಪಿದೆ.

ಬಸ್ಸು ನಿಂತ ತಕ್ಷಣ ಚಾಲಕ ಕೆಳಗಿಳಿದು ಮಗುವಿನತ್ತ ಧಾವಿಸಿ, ಅದನ್ನು ಸುರಕ್ಷಿತವಾಗಿ ಎತ್ತಿಕೊಂಡು ರಸ್ತೆಯ ಬದಿಗೆ ಕರೆತಂದಿದ್ದಾರೆ. ಬಳಿಕ ಸಮೀಪದ ಮನೆಗೆ ತೆರಳಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಮಗು ಹೇಗೆ ಮನೆಯಿಂದ ಹೊರಬಂದು ರಸ್ತೆಗೆ ತಲುಪಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಚಾಲಕನ ಎಚ್ಚರಿಕೆ ಮತ್ತು ಮಾನವೀಯತೆಯಿಂದ ಮಗು ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದು, ಈ ಘಟನೆ ಸಾರ್ವಜನಿಕರಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here