ಕರ್ನಾಟಕದ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ : ಬ್ಯಾಂಕ್ ಆಫ್ ಬರೋಡಾದಲ್ಲಿ ಹುದ್ದೆಗೆ ಅವಕಾಶ

0
7

ಬೆಂಗಳೂರು : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ (BOB) ಭರ್ಜರಿ ಉದ್ಯೋಗಾವಕಾಶ ನೀಡಿದೆ. ಬ್ಯಾಂಕ್‌ನಲ್ಲಿ ಖಾಲಿ ಇರುವ 2,482 ಲೋಕಲ್ ಬ್ಯಾಂಕ್ ಆಫೀಸರ್ (LBO – JMG/S-I) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಕರ್ನಾಟಕ ಸೇರಿದಂತೆ ದೇಶದ ಒಟ್ಟು 20 ರಾಜ್ಯಗಳಲ್ಲಿ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಕರ್ನಾಟಕದಲ್ಲಿ 418 ಹುದ್ದೆಗಳು ಲಭ್ಯವಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 18, 2026ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 7, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಾಗಿ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ.

ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಇದರ ಜೊತೆಗೆ ಸಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕನಿಷ್ಠ ಒಂದು ವರ್ಷದ ಕಾರ್ಯಾನುಭವ ಹೊಂದಿರುವುದು ಅಗತ್ಯವಾಗಿದೆ.

ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು ಹಾಗೂ ಮಾತನಾಡಲು ತಿಳಿದಿರಬೇಕು. ಕರ್ನಾಟಕದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ಆಗಸ್ಟ್ 1, 2026ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ಇರಬೇಕು. ಮೀಸಲಾತಿ ನಿಯಮಗಳ ಅನ್ವಯ SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಸೇರಿದಂತೆ ಇತರ ವರ್ಗಗಳಿಗೂ ಅನ್ವಯವಾಗುವ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ.

ಅಭ್ಯರ್ಥಿಗಳ ಆಯ್ಕೆ ಆನ್‌ಲೈನ್ ಪರೀಕ್ಷೆ, ಗ್ರೂಪ್ ಡಿಸ್ಕಶನ್/ವೈಯಕ್ತಿಕ ಸಂದರ್ಶನ ಹಾಗೂ ಸ್ಥಳೀಯ ಭಾಷಾ ಪ್ರಾವೀಣ್ಯತಾ ಪರೀಕ್ಷೆ (LPT) ಮೂಲಕ ನಡೆಯಲಿದೆ. ಹುದ್ದೆಗೆ ಸಂಬಂಧಿಸಿದ ಪರೀಕ್ಷಾ ಮಾದರಿ, ಪಠ್ಯಕ್ರಮ ಹಾಗೂ ಇತರ ವಿವರಗಳನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.

ಅರ್ಜಿ ಶುಲ್ಕದ ವಿಚಾರದಲ್ಲಿ ಸಾಮಾನ್ಯ, EWS ಹಾಗೂ OBC ಅಭ್ಯರ್ಥಿಗಳಿಗೆ ₹850, SC, ST, PwBD ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ₹175 ಶುಲ್ಕ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಿದ್ಯಾರ್ಹತೆ, ಅನುಭವ, ವಯೋಮಿತಿ, ಮೀಸಲಾತಿ ಹಾಗೂ ಇತರ ಅರ್ಹತಾ ಷರತ್ತುಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು.

ಪ್ರಮುಖ ದಿನಾಂಕಗಳು:
ಅರ್ಜಿ ಆರಂಭ: 18-08-2026
ಅರ್ಜಿ ಸಲ್ಲಿಸಲು ಕೊನೆಯ ದಿನ: 07-09-2026
ಒಟ್ಟು ಹುದ್ದೆಗಳು: 2,482
ಕರ್ನಾಟಕದ ಹುದ್ದೆಗಳು: 418

ಹುದ್ದೆಗೆ ಅರ್ಜಿ ಸಲ್ಲಿಸಲು ಹಾಗೂ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ ಪರಿಶೀಲಿಸಬಹುದು.