ವಾಮದಪದವ್ : ದೃಢ ನಿರ್ಧಾರವೊಂದಿದ್ದರೆ ನಮ್ಮನ್ನು ಯಾವನೇ ವ್ಯಕ್ತಿಯಿಂದ ತಪ್ಪು ದಾರಿಗೆ ಎಳೆಯಲು ಸಾಧ್ಯವಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ತಿಳಿಸಿದರು.
ಅವರು ಜೂನ್ 29 ಸೋಮವಾರ ವಾಮದಪದವು ಬಸ್ತಿಕೋಡಿ ಶ್ರೀ ಪದ್ಮಾವತಿ ಅಮ್ಮ ಸಭಾಭವನದಲ್ಲಿ ಜರಗುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2076ನೇ ಮದ್ಯವರ್ಜನ ಶಿಬಿರದ 4 ನೇ ದಿನದಲ್ಲಿ ಬೇಟಿ ನೀಡಿ ಮಾಹಿತಿ ನೀಡಿದರು.
ಜೀವನ ಎನ್ನುವುದು ದೇವರಿಂದ ಕೊಡಲ್ಪಡುವ ಬಹುದೊಡ್ಡ ಅವಕಾಶ. ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಶ್ರೇಷ್ಠ ಯಾರೆಂದರೆ ಅದು ಮನುಷ್ಯ. ಆದರೆ ಅತೀ ಹೆಚ್ಚು ತಪ್ಪು ಮಾಡುವವರು ಯಾರೆಂದರೆ ಅದು ಕೂಡಾ ಮನುಷ್ಯರೆ. ನಮ್ಮನ್ನು ನಾವು ತಿಳಿದುಕೊಂಡು, ನಮ್ಮ ಜವಾಬ್ದಾರಿ ಏನೆಂಬುದನ್ನು ಅರಿತು ಜೀವಿಸಿದರೆ ಜೀವನಕ್ಕೆ ಅರ್ಥ ಬರಬಹುದು. ಇಲ್ಲದಿದ್ದರೆ ಜೀವನ ವ್ಯರ್ಥ ಎಂದು ಅವರು ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರ ನಿಜಕ್ಕೂ ಅರ್ಥಪೂರ್ಣ. ಇದರ ಸದುಪಯೋಗವನ್ನು ಶಿಬಿರಾರ್ಥಿಗಳೆಲ್ಲರೂ ಪಡೆದುಕೊಂಡು, ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬೇಕು ಎಂದು ಅವರು ಹೇಳಿದರು.
ಶಿಬಿರದಲ್ಲಿ 67 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಭಾವೇದಿಕೆಯಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ,
ಗೌರವಾಧ್ಯಕ್ಷರಾದ ಹರೀಂದ್ರ ಪೈ,ತಾಲೂಕು ಯೋಜನಾಧಿಕಾರಿ ಜಯಾನಂದ,ಸಮಿತಿಯ ಉಪಾಧ್ಯಕ್ಷ ಪ್ರವೀಣ್ ಕಾಡಬೆಟ್ಟು, ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

