ಉಡುಪಿ : ಬ್ರಹ್ಮಾವರದಲ್ಲಿ ಘೋರ ದುರಂತ ಸಂಭವಿಸಿದೆ. ತಾಯಿಯ ಕಂಕುಳಲ್ಲಿದ್ದ ಎಂಟು ತಿಂಗಳ ಕಂದಮ್ಮನ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವನ್ನಪ್ಪಿದೆ.
ಕಳೆದ ಮಂಗಳವಾರ ಘಟನೆ ನಡೆದಿದೆ. ತೆಂಗಿನ ತೋಟದಲ್ಲಿದ್ದ ಮರದಿಂದ ಅಚಾನಕ್ ಆಗಿ ತೆಂಗಿನ ಕಾಯಿ ನೇರವಾಗಿ ಮಗುವಿನ ತಲೆಗೆ ಬಿದ್ದಿದೆ.
ಕೂಡಲೇ ಸ್ಥಳೀಯರು ಸೇರಿ ಮಗುವನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ಗಂಭೀರ ಏಟು ಆಗಿದ್ದರಿಂದ ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಈ ವಿಧಿಯಾಟಕ್ಕೆ ತೀವ್ರ ಶೋಕ ವ್ಯಕ್ತವಾಗಿದೆ. ತಂದೆ ಪ್ರಶಾಂತ್ ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ತಾಯಿ ಸುಚಿತ್ರಾ ಗೃಹಿಣಿಯಾಗಿದ್ದಾರೆ. ಮೃತಪಟ್ಟ ಮಗು ದಂಪತಿಗೆ ಎರಡನೇ ಪುತ್ರನಾಗಿದ್ದಾನೆ.
ಘಟನೆಯು ಸ್ಥಳೀಯ ವಲಯದಲ್ಲಿ ತೀವ್ರ ಆಘಾತವನ್ನು ಉಂಟುಮಾಡಿದೆ. ಕರಾವಳಿ ಭಾಗದಲ್ಲಿ ತೆಂಗಿನ ಮರಗಳು ಸಾಮಾನ್ಯವಾಗಿದ್ದರೂ, ಇಂತಹ ಆಕಸ್ಮಿಕಗಳು ಎಷ್ಟೊಂದು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಕಣ್ಣೀರಿನ ಸಾಕ್ಷಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಟಾಣಿ ಕಂದಮ್ಮನ ಅಕಾಲಿಕ ಮರಣಕ್ಕೆ ಇಡೀ ಚಾಂತಾರು ಗ್ರಾಮದ ಜನತೆ ಕಂಬನಿ ಮಿಡಿದಿದ್ದಾರೆ.

