ತೀರ್ಥಹಳ್ಳಿ : ಆಗುಂಬೆ ಘಾಟ್ ರಸ್ತೆಯಲ್ಲಿ ಮರದ ದಿಮ್ಮಿಗಳನ್ನು ತುಂಬಿಕೊಂಡು ಸಾಗುತ್ತಿದ್ದ ಮಿನಿ ಲಾರಿಯೊಂದು ಅಪಘಾತಕ್ಕೀಡಾಗಿದೆ. ನಿನ್ನೆ ರಾತ್ರಿ ಅಪಘಾತ ಸಂಭವಿಸಿದ್ದು, ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನ ಉರುಳಿ ಬಿದಿದೆ. ಪರಿಣಾಮ ಮರದ ದಿಮ್ಮಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.
ರಸ್ತೆಯಲ್ಲಿ ಮರದ ದಿಮ್ಮಿಗಳು ಬಿದ್ದ ಕಾರಣ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಗಂಟೆಗಟ್ಟಲೆ ನಿಂತಲ್ಲೇ ನಿಂತುಕೊಂಡಿದ್ದವು. ಬಳಿಕ ಸ್ಥಳೀಯರು ಹಾಗೂ ಕೆಲ ಪ್ರಯಾಣಿಕರು ಕಷ್ಟಪಟ್ಟು ಮರದ ದಿಮ್ಮಿಗಳನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.
ರಾತ್ರಿ 12 ಗಂಟೆಯ ಬಳಿಕ ನಿಧಾನವಾಗಿ ವಾಹನ ಸಂಚಾರ ಮರು ಆರಂಭಗೊಂಡಿತ್ತಾದ್ರೂ ಹಲವಾರು ಪ್ರಯಾಣಿಕರು ಇದರಿಂದ ತೊಂದರೆ ಅನುಭವಿಸಿದ್ದಾರೆ. ಆಗುಂಬೆ ಘಾಟ್‌ನಲ್ಲಿ ಭಾರಿ ಘನವಾಹನಗಳಿಗೆ ನಿಷೇಧ ಹೇರಲಾಗಿದ್ದು, ಈ ರೀತಿಯಾಗಿ ಮರ ಸಾಗಾಟದ ಮಿನಿ ವಾಹನಗಳಿಗೂ ನಿರ್ಬಂಧ ಇದೆ. ಆದ್ರೆ, ರಾತ್ರಿ ವೇಳೆಯಲ್ಲಿ ಕದ್ದು ಮುಚ್ಚಿ ಈ ರೀತಿ ಸಂಚಾರ ಮಾಡುತ್ತಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.