ವಿಶೇಷ ವರದಿ:-ಆದರ್ಶ್ ಶೆಟ್ಟಿ ಉಪ್ಪಿನಂಗಡಿ
ಇತ್ತೀಚಿನ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕ ಬಿಜೆಪಿಗೆ 2028ರ ವಿಧಾನಸಭಾ ಚುನಾವಣೆಯ ಸಿದ್ಧತೆಗಳು ಅತ್ಯಂತ ನಿರ್ಣಾಯಕವಾಗಿವೆ.
ಆಡಳಿತಾರೂಢ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲುಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಂತರಿಕ ಭಿನ್ನಮತ ಹಾಗೂ ನಾಯಕತ್ವದ ಕುರಿತ ಚರ್ಚೆಗಳು ಪ್ರತಿಪಕ್ಷ ಬಿಜೆಪಿಗೆ ಹೊಸ ರಾಜಕೀಯ ಅವಕಾಶಗಳನ್ನು ಒದಗಿಸಿವೆ.
ಆದಾಗ್ಯೂ, ಕೇವಲ ಆಡಳಿತ ವಿರೋಧಿ ಅಲೆಯನ್ನು ನೆಚ್ಚಿಕೊಳ್ಳದೆ, ಅಭಿವೃದ್ಧಿ ಆಧಾರಿತ ಪರ್ಯಾಯ ದೃಷ್ಟಿಕೋನ ಹಾಗೂ ಸ್ಪಷ್ಟ ಕಾರ್ಯಯೋಜನೆಯೊಂದಿಗೆ ಜನರ ಬಳಿಗೆ ಹೋಗುವುದು ಇಂದಿನ ಅಗತ್ಯವಾಗಿದೆ.
ಮುಂದಿನ ಚುನಾವಣೆಯಲ್ಲಿ ಅಧಿಕಾರದ ಗುರಿ ತಲುಪಲು ವ್ಯಕ್ತಿಕೇಂದ್ರಿತ ರಾಜಕಾರಣಕ್ಕಿಂತ ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ನೀಡಬೇಕಿದೆ. ತಳಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸುವುದು ಸ್ಪಷ್ಟ ಕಾರ್ಯತಂತ್ರದೊಂದಿಗೆ ಮುಂದುವರಿಸುವುದು ಕಾಂಗ್ರೆಸ್ ವಿರುದ್ಧದ ರಾಜಕೀಯ ಶಕ್ತಿಯನ್ನು ಒಗ್ಗೂಡಿಸಲು ನೆರವಾಗಲಿದೆ.
ಮೇಲ್ಮನೆ ಚುನಾವಣೆಯ ಗೆಲುವು ಕಾರ್ಯಕರ್ತರಲ್ಲಿ ನೈತಿಕ ಬಲ ತುಂಬಿದ್ದರೂ, ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಪಕ್ಷದ ಸಂಘಟನಾ ಸಾಮರ್ಥ್ಯಕ್ಕೆ ನಿಜವಾದ ಅಗ್ನಿಪರೀಕ್ಷೆಯಾಗಲಿವೆ.
ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಹಣಬಲ ಅಥವಾ ಪ್ರಭಾವಕ್ಕಿಂತ ನಿಷ್ಠಾವಂತ ಕಾರ್ಯಕರ್ತರು, ಸ್ಥಳೀಯ ಜನಪ್ರಿಯತೆ ಹಾಗೂ ಗೆಲ್ಲುವ ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕು.
ಬೂತ್ ಮಟ್ಟದ ಮುಖಂಡರ ಅಭಿಪ್ರಾಯ ಪರಿಗಣಿಸಿ ಬಂಡಾಯಕ್ಕೆ ಆಸ್ಪದ ನೀಡದಂತೆ ಆಂತರಿಕ ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಂಘಟಿತ ಪ್ರಯತ್ನದೊಂದಿಗೆ ಅಭಿವೃದ್ಧಿಯ ಅಜೆಂಡಾವನ್ನಿಟ್ಟುಕೊಂಡು ಮುನ್ನಡೆದರೆ ಬಿಜೆಪಿಗೆ 2028ರ ಅಧಿಕಾರದ ಹಾದಿ ಸುಗಮವಾಗಲಿದೆ.

