ಸಾರ್ವಜನಿಕರ ಎದುರಲ್ಲೇ ರಿಕ್ಷಾ ಅಡ್ಡಿಗಟ್ಟಿ ತಲವಾರು ದಾಳಿ, ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ!

0
126


ಮೈಸೂರು: ಮೈಸೂರು ನಗರದ ರಾಮಾನುಜ ರಸ್ತೆಯ 12ನೇ ಕ್ರಾಸ್​ನಲ್ಲಿ ಗುರುವಾರ ರಾತ್ರಿ ನಡೆದ ಭೀಕರ ಹಲ್ಲೆಯಿಂದ ಜನಗರದ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರಿ 9.20 ಕ್ಕೆ ಆಟೋದಲ್ಲಿ ಹೋಗುತ್ತಿದ್ದವರನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಹಾಕಿದ ದುಷ್ಕರ್ಮಿಗಳು ಏಕಾಏಕಿ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಘಟನೆಯ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗುತ್ತಿದೆ.

ಜನರಿಗೆ ಕಾನೂನಿನ ಬಗ್ಗೆ ಭಯವೇ ಇಲ್ಲದಂತಾಗಿದೆಯಾ? ಪೊಲೀಸ್ ಶಿಕ್ಷೆ ಎಂಬ ಬಗ್ಗೆ ಅಂಜಿಕೆಯೇ ಇಲ್ಲವೇ? ಇಂತಹ ಪ್ರಶ್ನೆಗಳಿಗೆ ಕಾರಣವಾಗಿರಿವುದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ನಡೆದಿರುವ ಬೆಚ್ಚಿ ಬೀಳಿಸುವ ಘಟನೆ. ನಡು ರಸ್ತೆಯಲ್ಲೇ ಚಲಿಸುತ್ತಿದ್ದ ಆಟೋವನ್ನು ಅಡ್ಡಹಾಕಿದ ಗೂಂಡಾಗಳ ಗುಂಪೊಂದು ಮಚ್ಚನಿಂದ ಏಕಾಏಕಿ ದಾಳಿ ಮಾಡಿದೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಂಥ ಬೆಚ್ಚಿಬಿಳಿಸುವ ಈ ಘಟನೆ ನಡೆದಿರುವುದು ಸಾಂಸ್ಕೃತಿ ನಗರಿ ಮೈಸೂರಿನ ಹೃದಯ ಭಾಗದಲ್ಲಿರುವ ಅಗ್ರಹಾರ ರಸ್ತೆಯಲ್ಲಿ. ಗುರುವಾರ ರಾತ್ರಿ 9:20ರ ಸುಮಾರಿಗೆ ನಡೆದ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಮೈಸೂರಿನಲ್ಲಿ ರಾತ್ರಿ ನಡೆದಿದ್ದೇನು?

ಅಗ್ರಹಾರ ರಸ್ತೆಯ ಜನದಟ್ಟಣೆ ಇರುವ ರಾಮಾನುಜಾ ರಸ್ತೆಯಲ್ಲಿ ಆಟೋ ಒಂದು ಅದರ ಪಾಡಿಗೆ ಹೋಗುತ್ತಾ ಇರುತ್ತದೆ. ಆಟೋವನ್ನೇ ಹಿಂಬಾಲಿಸಿಕೊಂಡು ಬಂದ ಕಪ್ಪು ಬಣ್ಣದ ಕಾರು ಏಕಾಏಕಿ ಆಟೋವನ್ನು ಅಡ್ಡಹಾಕಿದೆ. ಅಷ್ಟರಲ್ಲಾಗಲೇ ಮಚ್ಚು ಸಮೇತ ಕಾರಿನಿಂದ ಇಳಿದು ಬಂದು, ಆಟೋದೊಳಗಿದ್ದವರ ಮೇಲೆ ಮನಬಂದಂತೆ ಮಚ್ಚು ಬೀಸಿದ್ದಾರೆ. ಸ್ಥಳೀಯರು ಅದೇನಾಗುತ್ತದೆ ಎಂದು ನೋಡುವಷ್ಟರಲ್ಲಿ ಆಟೋದೊಳಗಿದ್ದ ಮೂವರು ಮಹಿಳೆಯರು ಹಾಗೂ ಒಬ್ಬ ಯುವಕನ ಮೇಲೆ ಯದ್ವಾತದ್ವಾ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ನಂತರ ಅದೇ ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಈ ಸಿನಿಮೀಯ ಶೈಲಿಯ ದಾಳಿಯ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾ ಹಾಗೂ ಸ್ಥಳೀಯರ ಮೊಬೈಲ್​​​ನಲ್ಲಿ ರೆಕಾರ್ಡ್ ಆಗಿದೆ.

ಘಟನೆಗೆ ಕಾರಣ ಏನು?

ಪೋಕ್ಸೋ‌ ಕೇಸೊಂದರ ರಾಜಿ ಸಂಧಾನ ವಿಫಲವಾದ ಕಾರಣ ದಾಳಿ ನಡೆದಿದೆ ಎಂಬ ಮಾಹಿತಿ ದೊರೆತಿದೆ. ಪ್ರಕರಣದ ಸಂತ್ರಸ್ತೆ ಕುಟುಂಬಸ್ಥರು ಆರೋಪಿತರ ಕುಟುಂಬದವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದವರುವ ಕುಮುದಾ, ವಿಶಾಲಾಕ್ಷಿ, ರೇಣುಕಮ್ಮ, ರಾಜಣ್ಣ ಎಂಬುದು ತಿಳಿದುಬಂದಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲಿ ಜನ ಸಂಚಾರ ಹೆಚ್ಚಾಗಿರುವ ಹೊತ್ತಿನಲ್ಲೇ ಇಂಥದ್ದೊಂದು ಘಟನೆ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

LEAVE A REPLY

Please enter your comment!
Please enter your name here