ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಉತ್ಸವಕ್ಕೆ ಸೋಮವಾರ ಕೃಷ್ಣಮಠದ ರಥಬೀದಿಗೆ ಜನಸಾಗರವೇ ಹರಿದುಬಂದಿದ್ದು, ಹುಲಿವೇಷಧಾರಿಗಳ ಅಬ್ಬರದೊಂದಿಗೆ ರಥೋತ್ಸವ ಸಂಪನ್ನಗೊಂಡಿತು.

ವಿಟ್ಲಪಿಂಡಿ ಮೆರವಣಿಗೆ
ಶ್ರೀಕೃಷ್ಣ ದೇವರ ಮೃಣ್ಮಯ ಮೂರ್ತಿ ಮೆರವಣಿಗೆಯಲ್ಲಿ ಗೋವಳರು (ಕೃಷ್ಣ ಮಠದ ಗೋವುಗಳನ್ನು ಪಾಲನೆ ಮಾಡುವವರು) ವಿಶೇಷ ವೇಷ ಧರಿಸಿ, ಕೈಯಲ್ಲಿ ಕೋಲು ಹಿಡಿದು, ತಲೆಗೆ ಹುಲ್ಲಿನ ಮುಂಡಾಸು ಕಟ್ಟಿಕೊಂಡು ನರ್ತಿಸುತ್ತ ಗುರ್ಜಿಗೆ ಕಟ್ಟಿದ್ದ ಮೊಸರು ಕುಡಿಕೆ ಒಡೆಯುತ್ತ ಸಾಗಿದರು.
ರಾಜಾಂಗಣ, ಅನ್ನಬ್ರಹ್ಮ ಭೋಜನಶಾಲೆಯಲ್ಲಿ ಸಾವಿರಾರು ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು. ಅಷ್ಟಮಿ ವಿಶೇಷ ಪ್ರಸಾದ ಉಂಡೆ, ಚಕ್ಕುಲಿಯನ್ನು ಭಕ್ತರಿಗೆ ವಿತರಿಸಲಾಯಿತು.
ವ್ಯಾಪಾರ ಜೋರು
ರಥಬೀದಿಯಲ್ಲಿ ವ್ಯಾಪಾರಕ್ಕೆ ಸೋಮವಾರ ರ್ನಿಬಂಧವಿಧಿಸಿದ್ದು, ವಿಟ್ಲಪಿಂಡಿ ಉತ್ಸವಕ್ಕೆ ಲಕ್ಷಾಂತರ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸರು ಬೀದಿಬದಿ ಮಾರಾಟಗಾರರನ್ನು ಹೊರಗೆ ಕಳುಹಿಸಿದರು. ಹೀಗಾಗಿ ಕನಕದಾಸ ರಸ್ತೆ, ಕೃಷ್ಣಾಪುರ ಮಠ ಓಣಿ, ತೆಂಕಪೇಟೆ ರಸ್ತೆ, ನಾರ್ತ್ ಶಾಲೆ ಸುತ್ತಮುತ್ತ ಆಟಿಕೆ, ಕರಕುಶಲ, ಗೃಹಪಯೋಗಿ, ವಿವಿಧ ಬಟ್ಟೆ, ಫ್ಯಾನ್ಸಿ ಪರಿಕರಗಳ ವ್ಯಾಪಾರಸ್ಥರು ಬೀಡುಬಿಟ್ಟಿದ್ದರು. ಖರೀದಿ ಪ್ರಕ್ರಿಯೆ ಜೋರಾಗಿತ್ತು.
ಪೊಲಿಸ್ ಬಿಗಿ ಭದ್ರತೆ
ರಥಬೀದಿಯಲ್ಲಿ ಶ್ರೀ ಕೃಷ್ಣನ ಉತ್ಸವದ ರಥ ಹಾಗೂ ಸ್ವಾಮೀಜಿಗಳಿಗೆ ಸಾಗಲು ಪೊಲೀಸರು ವಿಶೇಷ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು. ರಥಬೀದಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಜನ-ರ-ನ್ನು ನಿಯಂತ್ರಿಸಲು ಬ್ಯಾರಿ-ಕೇ-ಡ್ ಹಾಕಲಾಗಿತ್ತು. ವಾಹನದಟ್ಟಣೆ ನಿಯಂತ್ರಿಸಲು ನಗರದ ಕೆಲವೆಡೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಜಿಲ್ಲಾ ಸಶಸ ಮೀಸಲು, ನಾಗರಿಕ ಪೊಲೀಸರು, ಕೆಎಸ್ಆರ್ಪಿ, ಗೃಹರಕ್ಷಕದಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಹುಲಿವೇಷಧಾರಿಗಳಿಗೆ ನೋಟಿನ ಮಾಲೆ
ಭಾವೀ ಪರ್ಯಾಯ ಶೀರೂರು ಮಠದ ವತಿಯಿಂದ ರಥಬೀದಿಯಲ್ಲಿ ಅಳವಡಿಸಿದ್ದ ವೇದಿಕೆಯಲ್ಲಿ ಹುಲಿವೇಷ ಮತ್ತು ಜಾನಪದ ನೃತ್ಯ ನಡೆಯಿತು. ಶಿರೂರು ಶ್ರೀ ವೇದವರ್ಧನತೀರ್ಥರು ವೇಷಧಾರಿಗಳಿಗೆ ನೋಟಿನ ಮಾಲೆ ಹಾಕಿ ಗೌರವಿಸಿದರು.

