ಸ್ವಾವಲಂಬಿ ಬದುಕಿನತ್ತ ಹೆಜ್ಜೆ : ಪ್ರೇಮ ಮಂಜುನಾಥ

0
20

ಬ್ರಹ್ಮಾವರ : ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ಬ್ಯೂಟಿ ಪಾರ್ಲರ್ ತರಬೇತಿ ಉದ್ಘಾಟನ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರೇಮ ಮಂಜುನಾಥ, ಮಾಲಕರು ಹನಿ ಬ್ಯೂಟಿ ಪಾರ್ಲರ್, ತೆಕ್ಕಟ್ಟೆ, ಮಹಿಳಾ ಪ್ರಧಾನ ಕಾರ್ಯದರ್ಶಿ, ಮಹಿಳಾ ಒಕ್ಕೂಟ, ಉಡುಪಿ ಜಿಲ್ಲೆ ಹಾಗೂ ರಾಜ್ಯ ಸದಸ್ಯರು, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು ಮಹಿಳೆಯರಿಗೆ ಬಹಳ ಪ್ರಿಯವಾದ ಹಾಗೂ ಆಸಕ್ತಿಯ ಕ್ಷೇತ್ರವೆಂದರೆ ಅದು ಬ್ಯೂಟಿ ಪಾರ್ಲರ್ ನಿರ್ವಹಣೆ ಎಂದು ಹೇಳಬಹುದು.

ಹಾಗಾಗಿ ಆಸಕ್ತಿಯ ಕ್ಷೇತ್ರವನ್ನೇ ಉದ್ಯಮವನ್ನಾಗಿ ಪರಿವರ್ತಿಸಿಕೊಂಡಲ್ಲಿ ಆರ್ಥಿಕ ಸಬಲೀಕರಣವಾಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ನಾವೆಲ್ಲರೂ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಹಾಕಬಹುದು. ಈಗಿನ ಪ್ರಸ್ತುತ ಸಮಾಜದಲ್ಲಿ ಯಾವುದೇ ಡಿಗ್ರಿಗಳಿಗಿಂತ ಕೌಶಲ್ಯಾಧಾರಿತ ಕೆಲಸಗಳಿಗೆ ಹೆಚ್ಚಿನ ಆದ್ಯತೆ ಇರುವುದನ್ನು ನಾವು ಕಾಣುತ್ತೇವೆ. ಹಾಗಾಗಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದೀರಿ. ತರಬೇತಿಯನ್ನು ಪರಿಪೂರ್ಣವಾಗಿ ಪಡೆದುಕೊಂಡು ಆರ್ಥಿಕವಾಗಿ ಸಬಲತೆಯನ್ನು ಹೊಂದಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಅತಿಥಿ ಶ್ವೇತಾ ಶ್ರೀನಿಧಿ, ಮಾಜಿ ಅಧ್ಯಕ್ಷರು, ಕುಂಭಾಶಿ ಗ್ರಾಮ ಪಂಚಾಯತಿ ಮತ್ತು ಮಹಿಳಾ ಉದ್ಯಮಿ, ಇವರು ಮಾತನಾಡಿ ಮಹಿಳೆಯರ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಂತಹ ತರಬೇತಿಯನ್ನು ಪಡೆಯುತ್ತಿರುವುದು ಹೆಮ್ಮೆಯ ವಿಚಾರ. ಸಣ್ಣ ಮಟ್ಟಿನ ಉದ್ಯಮವನ್ನು ಪ್ರಾರಂಭಿಸಲು ಪ್ರಯತ್ನಿಸಿ, ಸಣ್ಣ ಪುಟ್ಟ ತೊಂದರೆಗಳಿಗೆ ಭಯಪಡದೆ, ಧೈರ್ಯದಿಂದ ಪ್ರಾರಂಭಿಸಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ, ಎಲ್ಲರೂ ಹೊಸತನ ಅಭಿವೃದ್ಧಿಯ ಕಡೆಗೆ ಚಿತ್ತವನ್ನು ಇಟ್ಟಿದ್ದೀರಿ, ಇದು ಅಭಿವೃದ್ಧಿಯ ಸಂಕೇತ. 35 ದಿವಸಗಳ ತರಬೇತಿಯಲ್ಲಿ ಕೌಶಲ್ಯದೊಂದಿಗೆ ವ್ಯಕ್ತಿತ್ವ ವಿಕಸನ ತರಗತಿಗಳನ್ನು ನೀಡಿ ಶಿಬಿರಾರ್ಥಿಯನ್ನು ಉದ್ಯಮಿಯಾಗಿ ತಯಾರಿ ನಡೆಸುತ್ತೇವೆ. ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿ, ಕಚೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಸಂತೋಷ್ ಶೆಟ್ಟಿ ವಂದಿಸಿದರು.