ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ವತಿಯಿಂದ ವಿಶ್ವ ಕಲಾ ದಿನಾಚರಣೆ ಅಂಗವಾಗಿ ಕಲೆಯ ಜೊತೆಗೆ ಕಲಾವಿದರನ್ನು ಗೌರವಿಸುವ ವಿಶೇಷ ಕಾರ್ಯಕ್ರಮದ ಮೂಲಕ 48 ವರ್ಷಗಳಿಂದ ನಂದಳಿಕೆ ಗ್ರಾಮದ ಅಬ್ಬನಡ್ಕ ಪರಿಸರದಲ್ಲಿ ಡೋಲುವಾದಕರಾಗಿ, ತೆಂಬರೆ, ಕೊಳಲುವಾದಕರಾಗಿ ಗುರುತಿಸಿಕೊಂಡಿರುವ ವಸಂತ ಹಾಗೂ ಯಮುನಾ ದಂಪತಿಗಳನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿಗಳಾದ ಪಾಂಗಾಳ ಬಾಬು ಕೊರಗ ಅವರು ಮಾತನಾಡಿ ಡೋಲು ತುಳುನಾಡಿನ ಪ್ರತಿಯೊಂದು ಹಬ್ಬ, ಜಾತ್ರೆ, ನೇಮೋತ್ಸವ, ಕಂಬಳ ಎಲ್ಲದರ ಹೃದಯ ಬಡಿತ. ಡೋಲಿನ ಶಬ್ದಗಳೇ ಜನರಲ್ಲಿ ಭಕ್ತಿಯ ಅಲೆಗಳನ್ನೆಬ್ಬಿಸುತ್ತವೆ. ಡೋಲು ಕೇವಲ ವಾದ್ಯವಲ್ಲ ಬದಲಾಗಿ ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿದೆ. ನಿರಂತರ ಕಲೆ ಹಾಗೂ ವಿವಿಧ ಕ್ಷೇತ್ರದ ಕಲಾವಿದರನ್ನು ಗೌರವಿಸುತ್ತಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾದ ಸುರೇಶ್ ಅಬ್ಬನಡ್ಕ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಯುವ ಉದ್ಯಮಿ ಇನ್ನಾ ಪ್ರೇಮ್ ಕುಲಾಲ್, ಉಪನ್ಯಾಸಕರಾದ ವೀಣೇಶ್ ಅಮೀನ್, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ನಿಕಟ ಪೂರ್ವಾಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸದಸ್ಯರಾದ ಯಶವಂತ್ ಕುಲಾಲ್ ಮೊದಲಾದವರಿದ್ದರು.

